ಆತ್ಮ ಹತ್ಯೆ ವರದಿಗಳು ಕಳವಳಕಾರಿ
ಕೋಲಾರ, ಸೆ,೧೨-ಮಕ್ಕಳು ವಿದ್ಯಾರ್ಥಿಗಳು ಹಾಗೂ ರೈತರು ಸೇರಿ ಪ್ರತಿ ವಷ ೮ ಲಕ್ಷಕ್ಕಿಂತ ಹೆಚ್ಚು ಜನರು ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದು ದೇಶದ ಅಭಿವೃದ್ಧಿಗೆ ತೊಂದರೆಯಾಗುತ್ತದೆ ಆದ್ದರಿಂದ ಆತ್ಮಹತ್ಯೆಯ ಬಗ್ಗೆ ಎಲ್ಲರಲ್ಲೂ ಅರಿವು ಮೂಡಬೇಕು ಆತ್ಮಹತ್ಯೆಗಳನ್ನು ತಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ್ ಎಸ್. ಹೊಸಮನಿ ಕರೆ ನೀಡಿದರು.
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಧ್ಯಕ್ಷತೆಯನ್ನು ವಹಿಸಿಕೊಂಡು ಅವರು ಮಾತನಾಡಿ ಕೌಟುಂಬಿಕ ಕಲಹಗಳಿಂದ, ಸಣ್ಣಪುಟ್ಟ ವಿಚಾರಗಳಿಂದ ಹಾಗೂ ಯಾವುದೇ ಮಾದಕ ವಸ್ತುಗಳನ್ನು ಅಧಿಕವಾಗಿ ಬಳಸುವುದರಿಂದ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ಕೇವಲ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಕ್ಕೆ ಸೀಮಿತವಾಗದೆ ಪ್ರತಿದಿನ ಅರಿವು ಮೂಡಿಸಬೇಕು ಎಂದರು.
ಆತ್ಮಹತ್ಯೆಗಳನ್ನು ತಡೆಗಟ್ಟುವ ಪ್ರತಿಜ್ಞೆಯನ್ನು ಮಾಡಲಾಯಿತು. ತಮ್ಮ ತಾಯಿ ಹೆಸರಲ್ಲಿ ಒಂದು ಗಿಡವನ್ನು ನಾಟಿ ಮಾಡಬೇಕು ಹಾಗೂ ಎಲ್ಲರೂ ತಮ್ಮ ಹುಟ್ಟು ಹಬ್ಬದಿನದಂದು ಒಂದು ಗಿಡವನ್ನು ನಾಟಿ ಮಾಡಿ ಪರಿಸರವನ್ನು ಸಂರಕ್ಷಿಸಬೇಕು ಎಂದು ಹೇಳಿದರು. ಹೆಚ್ಚಿನ ಮಾಹಿತಿ ಮತ್ತು ಆಪ್ತ ಸಮಾಲೋಚನೆಯನ್ನು ೧೪೪೧೬ ಗೆ ಕರೆ ಮಾಡಿ ಉಚಿತವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದು ೨೪ ಗಂಟೆಗಳ ಸೇವೆಯನ್ನು ನೀಡುತ್ತಿರುತ್ತದೆ ಎಂದು ಜಿಲ್ಲಾ ಮನೋವೈದ್ಯರಾದ ಡಾಕ್ಟರ್ ವಿಜೇತ ದಾಸ್ ರವರು ಹೇಳಿದರು
ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ವೈದ್ಯಾಧಿಕಾರಿಗಳಾದ ಡಾಕ್ಟರ್ ನಾರಾಯಣಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿಸ್ತಕರಾದ ಮಮತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎಂ.ಪ್ರೇಮ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲರಾದ ಚಂದ್ರಪ್ಪ, ಆರ್ ಎಲ್ ಜಾಲಪ್ಪ ಆಸ್ಪತ್ರೆ ಮನೋವೈದ್ಯರು ಡಾ|| ಮಹಮ್ಮದ್ ಮತ್ತು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.