ರಾಜ್ಯ ಸರ್ಕಾರ ಭದ್ರತಾ ವಿಷಯದಲ್ಲಿ ವೈಫಲ್ಯತೆ
ಕೋಲಾರ,ಸೆ.೧೨- ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಭದ್ರತಾ ವಿಷಯದಲ್ಲಿ ವೈಫಲ್ಯ ಅನುಭವಿಸುತ್ತಿದ್ದು ಐಸಿಸ್ ಉಗ್ರರಿಂದ ಬಿಜೆಪಿ ಕಚೇರಿ ಬ್ಲಾಸ್ಟ್ ಮಾಡಲು ಸಂಚು ಮಾಡಿದ್ದರು ಎಂಬ ಎನ್‌ಐಎ ವರದಿಯೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಕರ್ನಾಟಕ ಮಾವು ಮಂಡಳಿ ಮಾಜಿ ಅಧ್ಯಕ್ಷ ವಾಸುದೇವ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕೆಗಳಿಗೆ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಇಲಾಖೆ ಸಂಪೂರ್ಣ ವೈಫಲ್ಯ ಖಂಡಿದೆ. ಗುಪ್ತಚರ ಇಲಾಖೆ ನಿಷ್ಕ್ರಿಯವಾಗಿದೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾದಾಗ, ಇದು ವ್ಯಾಪಾರ ಗಲಾಟೆ ಎಂದು ಸಿದ್ದರಾಮಯ್ಯ ಸಂಪುಟದ ಸಚಿವರೊಬ್ಬರು ಬೇಜವಾಬ್ದಾರಿ ಹೇಳಿಕೆ ನೀಡಿದರು. ಇದರಿಂದಾಗಿಯೇ ಭಯೋತ್ಪಾದನಾ ಚಟುವಟಿಕೆ ವ್ಯವಸ್ಥಿತವಾಗಿ ನಡೆಯುತ್ತಿದೆ. ರಾಮೇಶ್ವರಂ ಕೆಫೆ ಬದಲಾಗಿ ಬಿಜೆಪಿ ಕಚೇರಿಯಲ್ಲಿ ಬಾಂಬ್ ಸ್ಫೋಟಿಸಬೇಕೆಂದು ಯೋಜನೆ ರೂಪಿಸಲಾಗಿತ್ತು ಎಂಬುದು ಎನ್‌ಐಎ ತನಿಖೆಯಲ್ಲಿ ಬಯಲಾಗಿದೆ. ರಾಜ್ಯ ಗೃಹ ಇಲಾಖೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನೂ ಮಾಜಿ ಸಚಿವ ನಾಗೇಂದ್ರ ಸೂಚನೆ ಮೇರೆಗೆ ವಾಲ್ಮೀಕಿ ನಿಗಮದ ಹಣ ಲಪಟಾಯಿಸಲಾಗಿದೆ ಎಂದು ಇಡಿ ಇಲಾಖೆ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.
ಬಳ್ಳಾರಿ ಲೋಕಸಭಾ ಚುನಾವಣೆ ವೇಳೆಯೂ ನಿಗಮದ ೨೦.೧೯ ಕೋಟಿ ರೂ. ಹಣ ಬಳಕೆ ವಿವಿಧ ಬ್ಯಾಂಕ್ ಖಾತೆಗಳಿಗೆ ನಿಗಮದ ಹಣ ವರ್ಗಾಯಿಸಿ ಬೂತ್ ಮಟ್ಟದಲ್ಲಿ ಹಣ ಹಂಚಿಕೆ ಮಾಡಿರುವುದನ್ನು ಇಡಿ ಆರೋಪ ಪಟ್ಟಿ ಸಲ್ಲಿಸಿದೆ. ನಾಗೇಂದ್ರ ಅವರ ಆಣತಿಯಂತೆಯೇ ಅಕ್ರಮ ನಡೆದಿದೆ. ೨೧ ಕೋ.ರೂ.ಗಳನ್ನು ಲೋಕಸಭಾ ಚುನಾವಣೆಗೆ ಬಳಸಿ ಕೊಳ್ಳಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಇದೆ. ಇದರಿಂದ ವಾಲ್ಮೀಕಿ ಹಗರಣ ಸರಕಾರಿ ಪ್ರಾಯೋಜಿತ ಎಂದು ಸಾಬೀತಾಗಿದೆ. ಈಗಾಗೀ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ವಾಸುದೇವ ಆಗ್ರಹಿಸಿದ್ದಾರೆ.