ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ತರಾಟೆ
ಕೋಲಾರ,ಸೆ,೧೨- ನಗರದ ಡಾ.ಬಿ.ಆರ್.ಅಂಬೇಡ್ಕರ್ ಪೋಸ್ಟ್ ಮೆಟ್ರಿಕ್ ಮಹಿಳಾ ಹಾಸ್ಟೆಲ್‌ಗೆ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ರವರು ಹಾಸ್ಟೆಲ್‌ನ ಅವ್ಯವಸ್ಥೆ ಕಂಡು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಹಾಗೂ ಸಹಾಯಕ ನಿರ್ದೇಶಕ ಚನ್ನಬಸಪ್ಪ ನವರನ್ನು ತರಾಟೆಗೆ ತೆಗೆದುಕೊಂಡರು.
ಬುಧವಾರ ಸಂಜೆ ೪ ಗಂಟೆಗೆ ಅಧ್ಯಕ್ಷರು ಹಾಸ್ಟೆಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಸ್ಟೆಲ್‌ನಲ್ಲಿರುವ ೩೫೦ ಹೆಣ್ಣು ಮಕ್ಕಳು ಬಾತ್ ರೂಂ ಗೆ ಡೊರ್ ಇಲ್ಲ, ಬಾಗಿಲಿಗೆ ಲಾಕ್ ಇಲ್ಲ, ಬಿಸಿ ನೀರು ಬರುವುದಿಲ್ಲ, ನ್ಯಾಪ್‌ಕಿನ್ ಮಿಷನ್ ಕೆಟ್ಟುಹೊಗಿದೆ, ಪುಸ್ತಕಗಳನ್ನು ಓದಲು ಲೈಬ್ರರಿ ಇಲ್ಲ, ರಾತ್ರಿ ಸಮಯದಲ್ಲಿ ವಿದ್ಯುತ್ ಇರುವುದಿಲ್ಲ, ನಮಗೆ ದಿನಬಳಕೆ ವಸ್ತುಗಳ ಕಿಟ್ ನೀಡುತ್ತಿಲ್ಲ ಎಂದು ಇನ್ನೂ ಅನೇಕ ಮಹಿಳೆಯರ ಸಮಸ್ಯೆಗಳ ಬಗ್ಗೆ ಅವಲತ್ತು ಕೊಂಡರು.
ಅಧ್ಯಕ್ಷರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಬಸಪ್ಪ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದಾಗ ಎಲ್ಲ ಸರಿಯಾಗಿದೆ ಎಂದು ಹಾರಿಕೆ ಉತ್ತರವನ್ನು ನೀಡಿದಾಗ, ಅಧ್ಯಕ್ಷರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಎಲ್ಲಿ ಎಂದು ಕೇಳಿದಾಗ ಅವರು ಬಂದಿಲ್ಲ ಎಂದಾಗ ತಕ್ಷಣ ದೂರವಾಣಿ ಕರೆಮಾಡಿ ಜಂಟಿ ನಿರ್ದೇಶಕ ಶ್ರೀನಿವಾಸ್ ಸ್ಥಳಕ್ಕೆ ಬರುವಂತೆ ತಿಳಿಸಿದರು.
ಸ್ಥಳಕ್ಕೆ ಬಂದ ಜಂಟಿ ನಿರ್ದೇಶಕ ಶ್ರೀನಿವಾಸ್ ಹಾಗೂ ಅಲ್ಲೆ ಇದ್ದ ಸಹಾಯಕ ನಿರ್ದೇಶಕ ಚನ್ನಬಸಪ್ಪ ಇಬ್ಬರನ್ನು ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು. ನಿಮ್ಮ ಮಕ್ಕಳಿಗೆ ನೀವೂ ಇದೇ ರೀತಿ ನೋಡಿ ಕೊಳ್ಳುತ್ತೀರಾ, ಮಕ್ಕಳು ಹೇಳಿದ ಎಲ್ಲಾ ಸಮಸ್ಯೆಗಳನ್ನು ನಾನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವುದರೊಳಗೆ ಬಗೆಹರಿಸುವಂತೆ ಸೂಚನೆ ನೀಡಿದರು.
ಕೋಲಾರ ತಹಶೀಲ್ದಾರ್ ಡಾ.ನಯನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ, ಕನ್ನಡಸೇನೆ ಜಿಲ್ಲಾಧ್ಯಕ್ಷ ಕನ್ನಡಮಿತ್ರ ವೆಂಕಟಪ್ಪ, ಮಾನವಹಕ್ಕುಗಳ ಸಂಘಟಣೆಯ ಅಧ್ಯಕ್ಷ ಗಲ್ ಪೇಟೆ ಸಂತೋಷ್, ಕಾಶಿ, ಚಂದ್ರು, ಮಹಿಳಾ ಸಂಘಟನೆ ಪದಾಧಿಕಾರಿಗಳಾದ ಜನವಾದಿ ಗೀತ, ಸರಸ್ವತಮ್ಮ, ಗಮನ ಶಾಂತಮ್ಮ, ಮಮತರೆಡ್ಡಿ ಮತ್ತಿತರರಿದ್ದರು.