ಹರಗಿನಡೋಣಿಯ ಟಿಬಿಎ ಗಣಿ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಮನವಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಅ.04:  ಹರಗಿನಡೋಣಿಯ ಟಿಬಿಎ ಗಣಿ ಕಾರ್ಮಿಕರಿಗಾಗಿರುವ ಸಂಕಷ್ಟ ಹಾಗೂ ಅವರಿಗೆ ದೊರೆಯಬೇಕಾದ ಕಾನೂನಾತ್ಮಕ ಸೌಲಭ್ಯಗಳು ನೀಡಬೇಕು ಮತ್ತು ಹೊಸ ಗಣಿ ಕಂಪೆನಿಯಲ್ಲಿ ಕಾರ್ಮಿಕರನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿ ಗಣಿ ಹಾಗೂ ಭೂವಿಜ್ಞಾನ ಉಪನಿರ್ದೇಶಕರಾದ ದ್ವಿತೀಯ ಅವರಿಗೆ ಮತ್ತು ಪ್ರಾದೇಶಿಕ ಕಾರ್ಮಿಕ ಆಯುಕ್ತರಾದ ಬಸವರಾಜ ಅವರಿಗೆ ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಸಂಯುಕ್ತ ಗಣಿ ಕಾರ್ಮಿಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ರಾಜ್ಯ ಅಧ್ಯಕ್ಷರು ಹಾಗೂ ಸಂಯುಕ್ತ ಗಣಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಸೋಮಶೇಖರ್ ಅವರು “ಟಿ.ಬಿ.ಎ ಗಣಿಯಲ್ಲಿ ಕಾರ್ಮಿಕರು ಬಹಳ ವರ್ಷಗಳ ಕಾಲ ತಮ್ಮ ಸೇವೆಯನ್ನ ಸಲ್ಲಿಸಿದ್ದಾರೆ. ಗಣಿ ಹಾಗೂ ರೆಡ್ ಆಕ್ಸೈಡ್ ಕಂಪೆನಿ ಸೇರಿದಂತೆ ಒಟ್ಟು 120 ಕಾರ್ಮಿಕರು ಕೆಲಸ ಮಾಡುತ್ತಾರೆ. ಇವರಲ್ಲಿ ಕೆಲವರು ನಿವೃತ್ತಿ ಹೊಂದಿದ್ದಾರೆ, ಕೆಲವರು ಸೇವೆಯಲ್ಲಿರುವಾಗಲೇ ಮರಣ ಹೊಂದಿದ್ದಾರೆ, ಕೆಲವರು ಇನ್ನು ಕೂಡ ಸೇವೆಯಲ್ಲಿದ್ದಾರೆ. ಈ ಮಧ್ಯೆ ಟಿಬಿಎ.ಪ್ರೈ.ಲಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀರಾಮ ವೇದಂ ಅವರು ಗಂಟಲು ಕ್ಯಾನ್ಸರ್‍ಗೆ ತುತ್ತಾಗಿ 2018ರಲ್ಲಿ ನಿಧನ ಹೊಂದಿದರು.
ಇದಾದ ಕೆಲವೇ ತಿಂಗಳುಗಳಲ್ಲಿ ಮೇ 2018ರಲ್ಲಿ ಗಣಿಯ ಗುತ್ತಿಗೆ ಅವಧಿ ಕೂಡ ಮುಗಿದಿದೆ. ಆದರೆ ಮುಂದಿನ ನಡೆಯ ಬಗ್ಗೆ, ಕಾರ್ಮಿಕರಿಗೆ ದೊರೆಯಬೇಕಾದ ಕಾನೂನುಬದ್ಧ ಸೌಲಭ್ಯಗಳ ಬಗ್ಗೆ ಇಲ್ಲಿಯವರೆಗೂ ಕಂಪೆನಿಯಿಂದಾಗಲಿ ಅಥವಾ ಶ್ರೀ ಶ್ರೀರಾಮ ವೇದಂ ಕುಟುಂಬ ಸದಸ್ಯರಿಂದಾಗಲೀ ಯಾವುದೇ ಮಾಹಿತಿ ಬಂದಿಲ್ಲ. 2015 ರಿಂದ 2018ರವರೆಗೆ ಕಾರ್ಮಿಕರು ಗ್ರಾಚ್ಯುಟಿ, ವೇತನ ಹಾಗೂ ಬೋನಸ್ ಅನ್ನು ಪಡೆದಿಲ್ಲ. ಸಂಯುಕ್ತ ಗಣಿ ಕಾರ್ಮಿಕರ ಸಂಘವು ಎಲ್ಲಾ ಬಾಕಿಯನ್ನು ಇತ್ಯರ್ಥಪಡಿಸುವಂತೆ ಶ್ರೀರಾಮ ವೇದಂ ಅವರೊಂದಿಗೆ ಚೆನ್ನೈನಲ್ಲಿ ಲಿಖಿತ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕೂ ಮುನ್ನ, ಸಂಧಾನ ನಡೆಸುವಂತೆ ಪ್ರಾದೇಶಿಕ ಕಾರ್ಮಿಕ ಆಯುಕ್ತರು, ಬಳ್ಳಾರಿ ಇವರಿಗೆ ಮನವಿ ಕೂಡ ಸಲ್ಲಿಸಿತ್ತು. ಆದರೆ ಸಮಸ್ಯೆಗೆ ಪರಿಹಾರ ಮಾತ್ರ ದೊರೆತಿಲ್ಲ.
ಇದಲ್ಲದೆ ಇತ್ತೀಚಗಷ್ಟೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯು, ಜಿವಿಪಿಆರ್ ಇಂಜಿನಿಯರ್ಸ್.ಲಿ ಎನ್ನುವ ಹೊಸ ಕಂಪೆನಿಗೆ ಗಣಿಯನ್ನು ಗುತ್ತಿಗೆಗೆ ಸಹ ನೀಡಿದೆ. ಅತ್ಯಂತ ಬಡತನದ ಹಿನ್ನಲೆಯಿರುವ, ಹಿಂದೆ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಈ ಹೊಸ ಕಂಪೆನಿಯಲ್ಲೂ ಮುಂದುವರೆಸಬೇಕೆಂಬುದು” ಆಗ್ರಹಿಸಿದರು.
“ಟಿಬಿಎ.ಪ್ರೈ.ಲಿ ಗಣಿಯು ಮುಚ್ಚುವ ಮುನ್ನ, ಸುಮಾರು 150 ಕೋಟಿ ಬೆಲೆ ಬಾಳುವ, 7.5 ಟನ್ ನಷ್ಟು ಕಬ್ಬಿಣದ ಅದಿರುನ್ನು ತೆಗೆಯಲಾಗಿದೆ. ಅದು ಟಿಬಿಎ.ಪ್ರೈ.ಲಿ ಗಣಿ ಕಂಪೆನಿಯ ಅಧೀನದಲ್ಲೇ ಇದೆ. ಇವುಗಳನ್ನು ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯು ಇ-ಆಕ್ಷನ್ ಮೂಲಕ ಮಾರಾಟ ಮಾಡುತ್ತದೆ ಎಂಬುದು ತಿಳಿದು ಬಂದಿದೆ. ಅಲ್ಲದೆ ಟಿಬಿಎ.ಪ್ರೈ.ಲಿಗೆ ಸೇರಿದ ರೂ.9,95,15,928 ಅಷ್ಟು ಹಣ ಕೂಡ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯಲ್ಲಿಯೇ ಇದೆ.  ಇದರಿಂದ ದೊರೆಯುವ ಹಣದಲ್ಲಿ ಬಾಕಿಯಿರುವ ಕಾರ್ಮಿಕರ ಕಾನೂನುಬದ್ಧ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂದರು.
ಸಂಯುಕ್ತ ಗಣಿ ಕಾರ್ಮಿಕರ ಸಂಘದ ಕಾರ್ಯದರ್ಶಿ ಸೋಮಶೇಖರ ಗೌಡ, ಎಐಯುಟಿಯುಸಿ ಜಿಲ್ಲಾಧ್ಯಕ್ಷರಾದ ಕಾ.ಎ.ದೇವದಾಸ್, ಕಾರ್ಮಿಕ ಮುಖಂಡರಾದ ಶಂಕ್ರಪ್ಪ, ಗಿರಿರಾಜ್, ಹುಲಿಗೆಮ್ಮ, ಸೀತಾಬಾಯಿ, ಹೊಸಗೇರಿ, ಡಾ.ಪ್ರಮೋದ್ ಉಪಸ್ಥಿತರಿದ್ದರು.