ಗಾಂಧಿ, ಶಾಸ್ತ್ರಿ ಆದರ್ಶ ಪಾಲನೆಗೆ ಕರೆ
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಅ.04 : ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಆದರ್ಶ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವ್ಯವಸ್ಥಾಪಕ ಮುರುಳೀಧರ ನಾಡಿಗೇರ ಕರೆ ನೀಡಿದರು.
ತಾಲೂಕಿನ ಹುಗಲೂರು ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿಯಂದು ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆ, ಪರಿಸರ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ನೆರವು ನೀಡುತ್ತಾ ಬಂದಿದೆ. ಅದರಂತೆ ಇಲ್ಲಿನ 110 ವಿದ್ಯಾರ್ಥಿಗಳಿಗೆ ಗುಣಮಟ್ಟದ ಬ್ಯಾಗ್ ಗಳನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮುಖ್ಯ ಶಿಕ್ಷಕ ಕೆ.ಮಲ್ಲಪ್ಪ, ಶಿಕ್ಷಕ ಹೆಚ್.ಜಿ.ಪಾಟೀಲ ಮಾತನಾಡಿ, ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳ ಜೀವನ, ಉದಾತ್ತ ಚಿಂತನೆಗಳು ಸಾರ್ವಕಾಲಿಕವಾಗಿವೆ. ಎಲ್ಲರೂ ಅವುಗಳನ್ನು ಅನುಸರಿಸುವುದರಿಂದ ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದರು. ಅಲ್ಲದೇ ಮಕ್ಕಳಿಗೆ ಬ್ಯಾಗ್ ಗಳನ್ನು ನೀಡಿ ಪ್ರೋತ್ಸಾಹಿಸಿದ ಕಿರ್ಲೋಸ್ಕರ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು
.
ಟ್ರಸ್ಟ್ ನ ಹಿರಿಯ ಅಧಿಕಾರಿ ಉಮೇಶ ಮೇಟಿ ಮಾತನಾಡಿ, ಎಚ್ಆರ್ ನಾರಾಯಣ ಪಿ. ಹಾಗೂ ಸಿಎಸ್ಆರ್ ಮಾಧವ ಕುಲಕರ್ಣಿಯವರ ವಿಶೇಷ ಕಾಳಜಿಯಿಂದ ಉತ್ತಮ ಗುಣಮಟ್ಟದ ಬ್ಯಾಗ್ ಗಳನ್ನು ಮಕ್ಕಳಿಗೆ ನೀಡಲು ಸಹಕಾರಿಯಾಯಿತು ಎಂದು ಸ್ಮರಿಸಿದರು. ಇದೇ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನಿರ್ಮಲಮ್ಮ, ಸದಸ್ಯರಾದ ಸಿ.ಹಾಲೇಶ, ಸೊಲ್ಲಪ್ಪ, ಮೋಚಯ್ಯ, ದಾದಾಪೀರ್, ನೀಲಕಂಠಪ್ಪ, ಮಾಜಿ ಅಧ್ಯಕ್ಷ ಮೇಟಿ ದೇವೇಂದ್ರಪ್ಪ, ಮಾಜಿ ಸದಸ್ಯ ಹೆಚ್.ಮಲ್ಲಿಕಾರ್ಜುನ, ಶಿಕ್ಷಕರಾದ ಆರ್.ಮಂಜುನಾಥ, ವಿ.ವಿಜಯಕುಮಾರ್, ಪವಿತ್ರಮ್ಮ ಉಪಸ್ಥಿತರಿದ್ದರು.
ಸ್ವಚ್ಚತಾ ಅಭಿಯಾನ ಅಂಗವಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಶ್ರಮದಾನದ ಮೂಲಕ ಶಾಲಾ ಮೈದಾನವನ್ನು ಸ್ವಚ್ಚಗೊಳಿಸಿದರು.