ಸೆಪ್ಟೆಂಬರ್ 15ರಂದು ಪ್ರಜಾಪ್ರಭುತ್ವ ದಿನಾಚರಣೆ ಬೃಹತ್ ಮಾನವ ಸರಪಳಿ
ಕಲಬುರಗಿ:ಸೆ.11:ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಪ್ರಾಮುಖ್ಯತೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಹಮ್ಮಿಕೊಂಡ ಮಾನವ ಸರಪಳಿ ಕಾರ್ಯಕ್ರಮವು ಜಿಲ್ಲೆಯಲ್ಲಿ ಸೆಪ್ಟೆಂಬರ್ 15ರಂದು ಜರುಗಲಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ನಿರ್ಮಾಣ ಮಾಡಲು ಉದ್ದೇಶಿಸಿರುವ 2500 ಕಿ.ಮೀ. ಉದ್ದದ ಮಾನವ ಸರಪಳಿ ವಿಶ್ವದಾಖಲೆಯನ್ನು ನಿರ್ಮಿಸಲಿದೆ ಎಂದು ಬಣ್ಣಿಸಿದರು.
ಪ್ರಪಂಚದಲ್ಲಿ ಯಾವುದೇ ಇಂತಹ ಮಾನವ ಸರಪಳಿ ಮಾಡಿದ ಉದಾಹರಣೆಗಳಿಲ್ಲ. ಸುಮಾರು 25 ಲಕ್ಷ ಜನರಿಂದ ನಿರ್ಮಾಣವಾಗಲಿರುವ ಮಾನವ ಸರಪಳಿಯು ವಿಶ್ವದಾಖಲೆ ನಿರ್ಮಿಸಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂವಿಧಾನ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಲಿದೆ. ಆ ನಿಟ್ಟಿನಲ್ಲಿ ಯುವ ಜನತೆ, ಬಡವರು, ಮಹಿಳೆಯರಿಗೆ ಸಂವಿಧಾನದ ಮಹತ್ವವನ್ನು ತಿಳಿಸಲು ರಾಜ್ಯ ಮಟ್ಟದ 600ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಮಾಡಿದ ಶ್ರೇಯಸ್ಸು ಸಚಿವರಾದ ಡಾ. ಎಚ್.ಸಿ. ಮಹಾದೇವಪ್ಪ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲುತ್ತದೆ. ಹಾಗಾಗಿ ಅವರಿಗೆ ಅಭಿನಂದಿಸುವುದಾಗಿ ಅವರು ತಿಳಿಸಿದರು.
ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಜಿಲ್ಲೆಯಲ್ಲಿ ಹಾದು ಹೋಗಲಿರುವ ಮಾನವ ಸರಪಳಿ ಬೀದರ್ ಜಿಲ್ಲೆಯಲ್ಲಿ ಮುಕ್ತಾಯದ ನಂತರ ಜಿಲ್ಲೆಯ ಮೊದಲ ಗ್ರಾಮ ಕಿಣ್ಣಿಸಡಕ್, ಡೊಂಗರಗಾಂವ್, ಮರಗುತ್ತಿ ಕ್ರಾಸ್, ನವದಗಿ, ಕಮಲಾಪೂರ್, ದಸ್ತಾಪೂರ್, ಮಹಾಗಾಂವ್ ಕ್ರಾಸ್, ಕುರಿಕೋಟಾ, ಸಿರಡೋನ್, ಸಿರಗಾಪೂರ್, ಆಲಗೂಡ್, ಅಂಕಲಗಾ, ಅವರಾದ್(ಬಿ), ತಾವರಗೇರಾ ಕ್ರಾಸ್, ಉಪಳಾಂವ್, ಕಪನೂರ್, ಶಹಾಬಾದ್ ವರ್ತುಲ ರಸ್ತೆ, ನಂದೂರು ಕೈಗಾರಿಕಾ ಪ್ರದೇಶ, ನಂದೂರ್, ಧರ್ಮಾಪೂರ್, ದೇವನ್ ತೆಗನೂರ್, ಭಂಕೂರ್ ಕ್ರಾಸ್, ವಾಡಿ ಕ್ರಾಸ್, ಶಂಕರವಾಡಿ, ಮಾಲಗತ್ತಿ, ರೇವೂರ್ ಬಲರಾಮ್ ಚೌಕ್, ಹಲಕಟ್ಟಿ, ಡಿಗ್ಗಿ ತಾಂಡಾ, ಲಾಡ್ಲಾಪೂರ್ ಮತ್ತು ದೇವಲನಾಯಕ ತಾಂಡಾ ಮುಂತಾದ ಊರುಗಳ ಮೂಲಕ ಮಾನವ ಸರಪಳಿ ಕಾರ್ಯಕ್ರಮ ಜರುಗಲಿದೆ ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿ ಸುಮಾರು 500 ಜನ ಸಮಿತಿಯ ಕಾರ್ಯಕರ್ತರು ಭಾಗವಹಿಸುವರು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಜನರು ಪಾಲ್ಗೊಳ್ಳಬೇಕು. ಎಲ್ಲ ಸಂಘಟನೆಗಳು, ಸಂಸ್ಥೆಗಳು ಸಮಯಕ್ಕೆ ಸರಿಯಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಸುರೇಶ್ ಹಾದಿಮನಿ, ಬಿ.ಸಿ. ವಾಲಿ, ಉಮೇಶ್ ನರೋಣಾ, ಕೃಷ್ಣಪ್ಪಾ ಕರಣಿಕ್ ಮುಂತಾದವರು ಉಪಸ್ಥಿತರಿದ್ದರು.