ಭೂದಾನ ಚಳುವಳಿಯ ಹರಿಕಾರ ಸಂತ ವಿನೋಬ ಭಾವೆ
ಕಲಬುರಗಿ:ಸೆ.11: ಮಹಾತ್ಮ ಗಾಂಧೀಜಿಯವರ ನೆಚ್ಚಿನ ಶಿಷ್ಯರಾಗಿ, ಅವರ ತತ್ವ-ಸಿದ್ಧಾಂತಗಳನ್ನು ಪಾಲಿಸಿಕೊಂಡು ಬಂದವರು ಸಂತ ವಿನೋಬ ಭಾವೆಯವರು. ಅಗತ್ಯಕ್ಕಿಂತ ಹೆಚ್ಚು ಭೂಮಿಯನ್ನು ಹೊಂದಿದ್ದ ಅನೇಕ ಜಮೀನುದಾರರ ಮನವೊಲಿಸಿ, ಭೂರಹಿತರಿಗೆ ಭೂಮಿಯನ್ನು ನೀಡುವ ಭೂದಾನ ಚಳುವಳಿಯ ಹರಿಕಾರರಾಗಿ, ಶ್ರೇಷ್ಠ ಸಮಾಜ ಸುಧಾರಕರಾಗಿ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಜೆ.ಆರ್ ನಗರದಲ್ಲಿನ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ಸಂತ ವಿನೋಬ ಭಾವೆಯವರ 129ನೇ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದ ಅವರು, ನಮ್ಮ ರಾಜ್ಯದಲ್ಲಿ ಅರಸು ಸರ್ಕಾರ ಊಳುವವನೇ ಭೂ ಒಡೆಯ ನೀತಿಯನ್ನು ಅನುಷ್ಠಾನಕ್ಕೆ ತಂದು ಅನೇಕರಿಗೆ ಅನಕೂಲ ಮಾಡಿಕೊಟ್ಟಿತು. ಇಂತಹ ಕ್ರಾಂತಿಕಾರಿ ಸುಧಾರಣೆಗೆ ಭಾವೆಯವರು ಪ್ರೇರಕ ಶಕ್ತಿಯಾಗಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್. ಬಿರಾದಾರ, ಶಿಕ್ಷಕಿ ಪ್ರಿಯಾಂಕಾ ಉಜಳಂಬಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.