ವಿವೇಕವಾಣಿ ಸಾರ್ವಕಾಲಿಕ ಪ್ರಸ್ತುತ
ಕಲಬುರಗಿ:ಸೆ.11: ಶ್ರೇಷ್ಟ ತತ್ವಜ್ಞಾನಿ ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೊದಲ್ಲಿ 1893ರ ಸೆ.11ರಂದು ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ, ಪ್ರತಿಯೊಬ್ಬರಲ್ಲಿ ಅಡಗಿರುವ ಅನಂತ ಶಕ್ತಿ, ಧೈರ್ಯ, ಪಾವಿತ್ರತೆ, ನಿಷ್ವಾರ್ಥತೆ, ಪರೋಪಕಾರ ಸೇವಾ ಮನೋಭಾವನೆ, ಭಾರತದ ಭವ್ಯ ಸಂಸ್ಕøತಿ, ಪರಂಪರೆ ಸೇರಿದಂತೆ ಅನೇಕ ವಿಷಯಗಳ ಮೇಲೆ ಜಗತ್ತಿಗೆ ನೀಡಿದ ಸಂದೇಶಕ್ಕೆ 131 ವರ್ಷ ಕಳೆದರೂ ಇಂದಿಗೂ ಕೂಡಾ ಅಚ್ಚಳಿಯದೇ ಉಳಿದಿದೆಯೆಂದರೇ, ವಿವೇಕಾನಂದರ ಮೇರು ವ್ಯಕ್ತಿತ್ವ ಎಂತಹದ್ದು ಎಂದು ತಿಳಿದುಬರುತ್ತದೆ. ವಿವೇಕವಾಣಿ ಸಾರ್ವಕಾಲಿಕ ಪ್ರಸ್ತುತವಾಗಿದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಗಂಗಾನಗರಲ್ಲಿನ ‘ಶ್ರೀ ವಿವೇಕಾನಂದ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ‘ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣದ 131ನೇ ವರ್ಷಾಚರಣೆ-ದಿಗ್ವಿಜಯ ದಿವಸ್’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರತಿಯೊಬ್ಬರು ಸಕಾರಾತ್ಮಕ ಚಿಂತನೆ ಮೈಗೂಡಿಸಕೊಂಡು ಕಾರ್ಯ ನಿರ್ವಹಿಸಿದರೆ ಉನ್ನತವಾದ ಸಾಧನೆಯಾಗುತ್ತದೆ. ದೇಶದಿಂದ ಪಡೆದ ಜ್ಞಾನವನ್ನು, ದೇಶದ ಒಳೊತಿಗಾಗಿ ಬಳಸಬೇಕೆಂಬ ವಿವೇಕಾನಂದರ ತತ್ವವನ್ನು ನನ್ನ ಜೀವನದಲ್ಲಿ ಅಳವಡಿಸಕೊಂಡು ಜ್ಞಾನ ದಾಸೋಹ ಕಾರ್ಯವನ್ನು ಮಾಡುತ್ತಿದ್ದೇನೆ. ವಿವೇಕಾನಂದರು ಯುವಕರ ಶಕ್ತಿ ಸಂಜೀವಿನಿ, ದೇಶದ ಭವ್ಯ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿ, ಭಾರತದ ಕೀರ್ತಿ ಪತಾಕೆಯನ್ನು ಎಲ್ಲೆಡೆ ಪಸರಿಸುವಂತೆ ಮಾಡಿದ ಮಹಾನ ಚೇತನಶಕ್ತಿಯಾಗಿದ್ದಾರೆ. ಅವರ ಸಂದೇಶ ಯುವಶಕ್ತಿ ಅಳವಡಿಸಿಕೊಂಡು ದೇಶಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಬೇಕೆಂದು ವಿದ್ಯಾರ್ಥಿಗಳಿಗೆ ಅವರ ಜೀವನ,ಸಾಧನೆಯನ್ನು ಸುದೀರ್ಘವಾಗಿ ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ಬಸವರಾಜ ಮಳ್ಳಿ ಮಾತನಾಡಿ, ವಿವೇಕಾನಂದರವರು ಧರ್ಮಕ್ಕೆ ಹೊಸ ಭಾಷ್ಯ ಬರೆದರು. ಅವರು ಶ್ರೇಷ್ಠ ಮಾನವತಾವಾದಿ, ತತ್ವಜ್ಞಾನಿಯಾಗಿದ್ದರು. ಯುವ ಸಮೂಹಕ್ಕೆ ದಾರಿದೀಪವಾಗಿದ್ದಾರೆ. ದೇಶದ ಯುವಶಕ್ತಿಯ ಸಂಪೂರ್ಣ ಸದುಪಯೋಗವಾಗಬೇಕು. ವಿದ್ಯಾರ್ಥಿ ದೆಸೆಯಿಂದಲೇ ನಿಗದಿತ ಗುರಿ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಜೀವನದಲ್ಲಿ ಉನ್ನತವಾದ ಸಾಧನೆ ಮಾಡಲು ಸಾಧ್ಯವಿದೆಯೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕುಮಾರದತ್ತ ಸೊಲ್ಲಾಪುರ, ಕಾರ್ಯದರ್ಶಿ ಗೊಲ್ಲಾಳಪ್ಪ ಜಮಾದಾರ, ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಗುಡಬಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಾವೇರಿ ಹೊನ್ನಳ್ಳಿ, ಪ್ರೌಢಶಾಲೆಯ ಶಿಕ್ಷಕಿಯರಾದ ರಾಜೇಶ್ವರಿ ಡಾಂಗೆ, ರೂಪಾ ಎಸ್.ಚೇಂಗಟಿ, ಅರ್ಚನಾ ಕುಲಕರ್ಣಿ, ನಿಖಿತಾ ಎಸ್., ಮೌನಿಕಾ ಹಾಗೂ ವಿದ್ಯಾರ್ಥಿಗಳಿದ್ದರು.