ಪ್ರಥಮ ಚಿಕಿತ್ಸೆ ಜೀವ ರಕ್ಷಕ
ಕಲಬುರಗಿ:ಸೆ.11:ಯಾವುದೇ ರೀತಿಯ ಅಪಘಾತ, ದೇಹವು ಅನಾರೋಗ್ಯಕ್ಕೆ ತುತ್ತಾದಾಗ ಆಸ್ಪತ್ರಗೆ ತೆರಳುವುದಕ್ಕಿಂತ ಮುಂಚಿತವಾಗಿ, ಮನೆ ಅಥವಾ ಅಫಘಾತವಾದ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪ್ರಥಮ ಚಿಕಿತ್ಸೆ ನೀಡಬೇಕು. ಇದು ವೈದ್ಯರೇ ಮಾಡಬೇಕೆಂಬುದು ಇಲ್ಲ. ನಿಮ್ಮ ಮನೆ, ಸ್ಥಳದಲ್ಲಿರುವ ಜೊತೆಗಾರರು ನೆರವೇರಿಸಬೇಕು. ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಜೀವಕ್ಕೆ ಆಪತ್ತಿರುವುದರಿಂದ, ಪ್ರಥಮ ಚಿಕಿತ್ಸೆ ತುಂಬಾ ಅಗತ್ಯವಾಗಿದೆ ಎಂದು ಉಪನ್ಯಾಸಕ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ‘ಅಂತಾರಾಷ್ಟ್ರೀಯ ಪ್ರಥಮ ಚಿಕಿತ್ಸೆ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಫಘಾತ ಸಂಭವಿಸಿದಾಗ, ಗಾಯವಾದ ಭಾಗವನ್ನು ಸ್ವಚ್ಛಗೊಳಿಸಿ ರಕ್ತ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಜ್ವರಕ್ಕೆ ತಣ್ಣನೆ ಬಟ್ಟೆಯಿಂದ ಮೈಯೆಲ್ಲಾ ಒರೆಸುವುದು, ವಾಂತಿ-ಬೇಧಿಗೆ ಸಕ್ಕರೆ ಪಾನಕ ನೀರನ್ನು ಕುಡಿಸುವುದು, ಹೃದಯಘಾತ ಸಂಭವಿಸುವ ಲಕ್ಷಣ ಕಂಡುಬಂದರೆ ಅದೇ ಸ್ಥಳದಲ್ಲಿ ಸ್ಥಿರವಾಗಿ ಕುಳಿತುಕೊಳ್ಳುವುದು, ಮೋರ್ಛೆ ರೋಗ ಉಂಟಾದರೆ ತಕ್ಷಣ ಬಲಬದಿಯಲ್ಲಿ ಮಲಗಿಸಬೇಕು ಮತ್ತು ಕೈ-ಕಾಲು ಚಲಿಸದಂತೆ ನೋಡಿಕೊಳ್ಳವುದು, ಚೇಳು ಮತ್ತು ಹಾವಿನಂತಹ ವಿಷಪೂರಿತ ಜೀವಿಗಳು ಕಡಿದರೆ, ತಕ್ಷಣವೇ ಆ ಸ್ಥಳವನ್ನು ಬ್ಲೇಡ್‍ನಿಂದ ಪ್ಲಸ್ ಆಕಾರಲ್ಲಿ ಕತ್ತರಿಸಿ, ವಿಷಪೂರಿತ ರಕ್ತವನ್ನು ಹೊರಹಾಕಬೇಕು ಮತ್ತು ಕಡಿದ ಸ್ಥಳದ ಮೇಲ್ಭಾಗದಲ್ಲಿ ಬಟ್ಟೆಯಿಂದ ಕಟ್ಟಬೇಕು. ಇದರಿಂದ ವಿಷ ಮೈತುಂಬಾ ಹರಡುವುದಿಲ್ಲವೆಂದು ಸೇರಿದಂತೆ ಅಪಘಾತ, ಅನೇಕ ಕಾಯಿಲೆಗಳಿಗೆ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಆಸ್ಪತ್ರಗೆ ತೆರಳಿಯೇ ಚಿಕಿತ್ಸೆ ಪಡೆಯುತ್ತೇವೆಂಬ ಮನೋಭಾವನೆ ಜೀವಕ್ಕೆ ತೊಂದರೆ ಮಾಡುತ್ತದೆ. ಮುಂಚಿತವಾಗಿ ಪ್ರಥಮ ಚಿಕಿತ್ಸೆ ಮಾಡಿ, ನಂತರ ಆಸ್ಪತ್ರೆಗೆ ತೆರಳಿದರೆ ರೋಗಿಗೆ ಆತ್ಮವಿಶ್ವಾಸ ಬರುವುದರ ಜೊತೆಗೆ, ವೈದ್ಯರಿಗೂ ಕೂಡಾ ಚಿಕಿತ್ಸೆ ನೀಡಲು ಅನಕೂಲವಾಗುತ್ತದೆ. ಅನೇಕ ಪ್ರದೇಶಗಳಲ್ಲಿ ಸಮೀಪದಲ್ಲಿ ಆಸ್ಪತ್ರೆ ಇಲ್ಲದಿರುವ ಸ್ಥಿತಿಯಲ್ಲಿ ಇದು ಜೀವದ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ. ಹೆನ್ರಿ ಡ್ಯೂನಾಂಟ್ ಅವರ ಕೊಡುಗೆ ಮರೆಯುವಂತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿ ನಿಲೊಫರ್ ಶೇಖ್, ಪ್ರಮುಖರಾದ ವರುಣಕುಮಾರ, ರಮೇಶ್, ಕಲ್ಮೇಶ್, ಸೂರ್ಯಕಾಂತ ಹಾಗೂ ವಿದ್ಯಾರ್ಥಿಗಳಿದ್ದರು.