ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಲೋಕಾಯುಕ್ತ ಎಸ್ಪಿ
ಸೇಡಂ,ಸೆ 11: ಇಲ್ಲಿನ ತಹಶೀಲ್ ಕಚೇರಿಯಲ್ಲಿ ಲೋಕಾಯುಕ್ತ ಎಸ್ಪಿ ಬಿ .ಕೆ. ಉಮೇಶ್ ಅವರು ಸಾರ್ವಜನಿಕರ ಅರ್ಜಿ ಅಹವಾಲು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾರ್ವಜನಿಕರಿಂದ ಬಂದ ಅರ್ಜಿಗಳಿಗೆ ತಕ್ಷಣ ಅಧಿಕಾರಿಗಳು ಸ್ಪಂದಿಸಬೇಕು ಎಂದು ತಾಲೂಕ ಆಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸೇಡಂ ನಗರದ ಚರಂಡಿಗಳಲ್ಲಿ ಕಸ ತುಂಬಿದೆ. ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ ಕಾಣುತ್ತಿದೆ. ಬಡವರಿಂದ ಲಂಚ ಸ್ವೀಕರಿಸಿ ಕೆಲಸ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಸೇಡಂ ಜೈ ಭೀಮ್ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಲ ಕಡೆ ಕಸ ಕಡ್ಡಿ ತುಂಬಿ ನಾಲಿ ದುರ್ವಾಸನೆ ಬರುತ್ತಿದೆ. ಶಾಲೆ ಮಕ್ಕಳಿಗೆ ಬಹಳಷ್ಟು ತೊಂದರೆಯಾಗುತ್ತದೆ . ಪುರಸಭೆ ಅಧಿಕಾರಿಗಳಿಗೆ ಎಷ್ಟೋ ಸಲ ಮನವಿ ಮಾಡಿದ್ದೇನೆ ಎಂದು ನಾಗಪ್ಪ ಎಂಬುವವರು ದೂರಿದರು
ರೇಷನ್ ಕಾರ್ಡ್‍ಗಾಗಿ ಅರ್ಜಿ ಹಾಕಿದ್ದೀವಿ .ಮೂರು ವರ್ಷ ನಾಲ್ಕು ವರ್ಷ ಆಯ್ತು. ನಮಗೆ ರೇಷನ್ ಕಾರ್ಡುಗಳು ಇನ್ನೂ ಸಿಕ್ಕಿಲ್ಲ. ಅರ್ಜಿಗಳನ್ನು ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ ಎಂದು ನಾಗರಿಕರೊಬ್ಬರು ದೂರಿದರು. ಆಹಾರ ಇಲಾಖೆ ಅಧಿಕಾರಿ ಸತ್ಯನಾರಾಯಣ ಆದಷ್ಟು ಬೇಗನೆ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಲೋಕಾಯುಕ್ತರಿಗೆ ತಿಳಿಸಿದರು.
ವಾಸವದತ್ತ ಸಿಮೆಂಟ್ ಫ್ಯಾಕ್ಟರಿ ಧೂಳಿನಿಂದ ಸಾರ್ವಜನಿಕರಿಗೆ ಮತ್ತು ಸಣ್ಣ ಮಕ್ಕಳಿಗೆ ವೃದ್ಧರಿಗೆ ಬಹಳಷ್ಟು ಕಾಯಿಲೆಗಳು ಬರುತ್ತಿವೆ. ಅಧಿಕಾರಿಗಳು ಸಿಮೆಂಟ್ ಫ್ಯಾಕ್ಟರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಯ ಕರ್ನಾಟಕ ಸಂಘಟನೆ ಸೇಡಂ ತಾಲೂಕು ಅಧ್ಯಕ್ಷ ರವೀಂದ್ರ ನಾಯಕ್ ಅಹವಾಲು ಸಲ್ಲಿಸಿದರು.ಡಿವೈಎಸ್ಪಿ ಗೀತಾ ಬೆನಾಳ, ಇನ್‍ಸ್ಪೆಕ್ಟರ್ ರಾಜಶೇಖರ್, ಮಲೆನಾಥ್, ಬಸವರಾಜ್, ಸಿದ್ದರಾಮ್, ಅನಿಲ್, ಪೌಡಪ್ಪ ಸಿಬ್ಬಂದಿಗಳು ಉಪಸ್ಥಿತರಿದ್ದರು.