ವರದಕ್ಷಿಣೆ ಕಿರುಕುಳ;ಪತ್ನಿ ಕೊಲೆ:ಪತಿಗೆ 7 ವರ್ಷ ಜೈಲುಶಿಕ್ಷೆ
ಕಲಬುರಗಿ,ಸೆ 11: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಕೆಯ ಪತಿಗೆ 7 ವರ್ಷ ಸಾದಾ ಜೈಲು ಶಿಕ್ಷೆ ಮತ್ತು 25 ಸಾವಿರ ರೂ ದಂಡ ವಿಧಿಸಿ, ಇಲ್ಲಿನ 5 ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಫರಹತಾಬಾದ್ ಗ್ರಾಮದ ಶರಣಪ್ಪ ಚಂದ್ರಶಾ ತಳವಾರ ಶಿಕ್ಷೆಗೊಳಗಾದ ವ್ಯಕ್ತಿ.ಅಫಜಲಪುರ ತಾಲೂಕಿನ ಅವರಳ್ಳಿ ಗ್ರಾಮದ ಶಿವರಾಜ ಬಂದರವಾಡ ಎಂಬುವವರ ಮಗಳು ಭಾಗ್ಯಶ್ರೀಯನ್ನು ಶರಣಪ್ಪ ಮದುವೆಯಾಗಿದ್ದರು.ವರನಿಗೆ 10 ತೊಲೆ ಬಂಗಾರ,2 ಲಕ್ಷ ರೂ ನಗದು ಮತ್ತು 1 ಲಕ್ಷ ರೂ ಮೌಲ್ಯದ ಪೀಠೋಪಕರಣ ನೀಡಲಾಗಿತ್ತು.ಇಷ್ಟಾದರೂ ಸಹ ಪತಿ ಶರಣಪ್ಪ ಮತ್ತು ಅತ್ತೆ ಸೇರಿದಂತೆ ಕುಟುಂಬದ ಸದಸ್ಯರು ಹೆಚ್ಚಿನ ವರದಕ್ಷಿಣೆಗಾಗಿ ಬಾಗ್ಯಶ್ರೀಗೆ ಮಾನಸಿಕ,ದೈಹಿಕ ಕಿರುಕುಳ ನೀಡುತ್ತಿದ್ದರು.2018 ರ ಜನವರಿ 19 ರಂದು ಭಾಗ್ಯಶ್ರೀ ಕಾಣೆಯಾಗಿದ್ದರು. 22 ರಂದು ಅವರ ಮೃತದೇಹ ಬಾವಿಯಲ್ಲಿ ದೊರಕಿತ್ತು. ಒಟ್ಟು 10 ಜನರ ವಿರುದ್ಧ ಫರತಾಬಾದ್ ಠಾಣೆಗೆ ದೂರು ನೀಡಲಾಗಿತ್ತು.
ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ಕೈಗೆತ್ತಿಕೊಂಡ 5 ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ತೀರ್ಪು ನೀಡಿದ್ದಾರೆ.ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಹಯಾಳಪ್ಪ ಎನ್ ಬಳಬಟ್ಟಿ ಅವರು ವಾದ ಮಂಡಿಸಿದ್ದರು.