ಗುಲಬರ್ಗಾ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಸ್ಯೆ ಖಂಡಿಸಿ ಎಬಿವಿಪಿ ಮನವಿ
ಬೀದರ: ಸೆ.11:ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ 1984 ರಲ್ಲಿ ಸ್ಥಾಪನೆಯಾಗಿ, ಇಲ್ಲಿಗೆ 42 ವರ್ಷಗಳು ಕಳೆಯುತ್ತಾ ಬಂದಿವೆ. ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತುಬಂದ, ಸದರಿ ವಿಶ್ವವಿದ್ಯಾಲಯವು ನಂತರ ವರ್ಷಗಳಲ್ಲಿ (ಶಿಕ್ಷಣದ ಕಾಶಿ, ಅಕ್ಷರ ದಾಸೋಹ ಮಂದಿರ) ಆಗುವ ಬದಲು ಭ್ರಷ್ಟಾಚಾರದ ವ್ಯವಸ್ಥೆಯಾಗಿ ರೂಪುಗೊಂಡಿದೆ. ಅನೇಕ ವರ್ಷಗಳಿಂದ ಇಲ್ಲಿನ ಆಡಳಿತ ವ್ಯವಸ್ಥೆ ಸಂಪೂರ್ಣ ಅಧೋಗತಿಗೆ ತಲುಪಿದ್ದು, ಪಾರದರ್ಶಕ ಆಡಳಿತ ನೀಡಲು ವಿಫಲತೆಯನ್ನು ಕಂಡಿದೆ. ಇದರಿಂದ ವಿದ್ಯಾರ್ಥಿಗಳ ಕನಸು ನುಚ್ಚು ನೂರಾಗಿದೆ. ಸರ್ಕಾರದ ನಿರ್ಲಕ್ಷ ಇಲ್ಲಿನ ಅಧಿಕಾರಿಗಳಿಗೆ ಮತ್ತು ಆಯಾ ವಿಭಾಗದ ನೌಕರಸ್ಥರಿಗೆ ಖುಷಿಯ ವಿಚಾರವಾಗಿದೆ. ಆದ್ದರಿಂದ ಇಲ್ಲಿ ಭ್ರಷ್ಟಾಚಾರ ಬಲಿತು ಅಮಾಯಕ ವಿದ್ಯಾರ್ಥಿಗಳನ್ನು ಶೋಷಣೆಗೆ ಎಡೆಮಾಡಿದೆ. ವಿದ್ಯಾರ್ಥಿಗಳು ಅಗಸ್ಟ್ ಮೊದಲೇ ವಾರದಲ್ಲೇ ಪದವಿ ಪರೀಕ್ಷೆಗಳ ಫಲಿತಾಂಶ ಘೋಷಿಸಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಇದುವರೆಗೆ ಅಂಕಪಟ್ಟಿ ಕೈಸೇರಿಲ್ಲ. ಇಷ್ಟೇ ಅಲ್ಲ ಅವರು ಯಾವ ವಿಷಯದಲ್ಲಿ ಎಷ್ಟು ಅಂಕಗಳಿಸಿದ್ದಾರೆ, ಒಟ್ಟು ಅಂಕಗಳು ಬಂದದ್ದೆಷ್ಟು ಎಂಬ ಮಾಹಿತಿಯೇ ಲಭ್ಯವಾಗಿಲ್ಲ.
ಆನ್‍ಲೈನ್ ಹಾಗೂ ಆಫ್‍ಲೈನ್ ಎರಡರಲ್ಲೂ ಅವರ ಫಲಿತಾಂಶ ತಿಳಿಯುತ್ತಿಲ್ಲ. ಈ ಸಂಬಂಧ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಸಂಪರ್ಕಿಸಿದಾಗ “ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ, ಇಷ್ಟರಲ್ಲಿ ಬರಬಹುದು” ಎಂದು ಪ್ರತಿ ಸಲ ಸಿದ್ಧ ಉತ್ತರ ಕೊಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪದವಿ 6ನೇ ಸೆಮಿಸ್ಟರ್ ಪರೀಕ್ಷೆ ಬರೆದವರು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬೇಕು. ಆದರೆ ಅಂಕಪಟ್ಟಿಯೇ ಬರದ ಕಾರಣ ಪ್ರವೇಶ ಪಡೆಯಲಾಗುತ್ತಿಲ್ಲ. ಕೆಲ ವಿದ್ಯಾರ್ಥಿಗಳು 4ನೇ, 5ನೇ ಸೆಮಿಸ್ಟರ್ ಪರೀಕ್ಷೆ ಬರೆದಿದ್ದಾರೆ. ಆದರೆ ಇದುವರೆಗೆ ಯಾವ ಸೆಮಿಸ್ಟರ್‍ನ ಅಂಕಪಟ್ಟಿ ಅವರಿಗೆ ಸಿಕ್ಕಿಲ್ಲ. ಕೆಲ ವಿದ್ಯಾರ್ಥಿಗಳ ಅಂಕಪಟ್ಟಿಯೇ ಒಂದೇ ರೀತಿ ಅಂಕಗಳು ತೋರಿಸುತ್ತಿದೆ. ಇನ್ನು ವಿದ್ಯಾರ್ಥಿ ಅಂಕ ಪಟ್ಟಿಯಲ್ಲಿ ಶೂನ್ಯ ಅಂಕಗಳು ತೋರಿಸುತ್ತಿದೆ. ಮೂರು ವರ್ಷದ ಪದವಿಯಲ್ಲಿ ಒಟ್ಟು 6 ಸೆಮಿಸ್ಟರ್‍ಗಳಿದ್ದು, ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಹಿಂದಿನ ಸೆಮಿಸ್ಟರ್‍ಗಳ ಅಂಕಪಟ್ಟಿ ಬರದಿದ್ದರೂ ನಂತರದ ಸೆಮಿಸ್ಟರ್‍ನಲ್ಲಿ ಮುಂದುವರೆಸಲಾಗುತ್ತಿದೆ. ಆದರೆ 6ನೇ ಸೆಮಿಸ್ಟರ್ ಬರೆದವರು ಪಿ.ಜಿ. ಪ್ರವೇಶಕ್ಕೆ ಪರದಾಡುವಂತಾಗಿದೆ. “ಅಂಕಪಟ್ಟಿ ಸಂಬಂಧ ವಿದ್ಯಾರ್ಥಿಗಳು, ಪಾಲಕರು ಓದುತ್ತಿರುವ ಕಾಲೇಜು ಹಾಗೂ ವಿಶ್ವವಿದ್ಯಾಲಯ ಎರಡಕ್ಕೂ ಅಲೆದಾಡಿ ಸಾಕಾಗಿದೆ”. ಪ್ರತಿ ಸಲ ಹೋಗಿ ವಿಚಾರಿಸಿದಾಗ “ಇಷ್ಟರಲ್ಲೇ ಬರುತ್ತೆ” ಎಂದು ಸಮಾಧಾನ ಉತ್ತರ ಹೇಳುತ್ತಾರೆ. ಆದರೆ ನಿರ್ದಿಷ್ಟವಾಗಿ ಏನನ್ನೂ ಹೇಳುವುದಿಲ್ಲ. ನಾವು ಪಿ.ಜಿ.ಗೆ ಪ್ರವೇಶ ಪಡೆಯಬೇಕು. ಆದರೆ ವಿದ್ಯಾರ್ಥಿಗಳಿಗೆ ಎಷ್ಟು ಅಂಕ ಬಂದಿವೆ ಎಂಬ ಬಗ್ಗೆ ಮಾಹಿತಿಯು ಇರುವುದಿಲ್ಲ.
ಹೀಗೆ ಒಂದಲ್ಲ ಎರಡಲ್ಲ ನಿತ್ಯ ನೂರಾರು ಸಮಸ್ಯೆಗಳನ್ನು ವಿಶ್ವವಿದ್ಯಾಲಯ ಮಾಡುತ್ತಾ ಬಂದಿದೆ. ಇದಕ್ಕೆ ಕೊನೆಯೇ ಇಲ್ಲದಂತಾಗಿದೆ. ಅಮಾಯಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳುತ್ತಿವೆ. ಇದಕ್ಕೆಲ್ಲ ಹಲವು ವರ್ಷಗಳಿಂದ ಅಸ್ತಿತ್ವಕ್ಕೆ ಬರುವ ಸರ್ಕಾರಗಳೇ ಹೊಣೆ ಎಂದು ಎ.ಬಿ.ವಿ.ಪಿ. ಆಗ್ರಹಿಸುತ್ತದೆ.
ಒಂದು ವೇಳೆ ಸರ್ಕಾರ ಸೂಕ್ತ ಮತ್ತು ಕಠಿಣ ನಿರ್ಧಾರ ಕ್ರಮಗಳನ್ನು ವಿಶ್ವವಿದ್ಯಾಲಯದ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಂಡಿದ್ದರೆ ಇವತ್ತು ಭ್ರಷ್ಟಾಚಾರ ಇಷ್ಟೊಂದು ವ್ಯಾಪಕವಾಗಿ ಬೇರುಡುತ್ತಿರಲಿಲ್ಲ.
ವಿದ್ಯಾರ್ಥಿಗಳ ಸಮಸ್ಯೆಗಳು: ಸರಿಯಾದ ಸಮಯಕ್ಕೆ ಪರೀಕ್ಷೆಗಳು ನಡೆಯದೇ ಇರುವುದು, ಉದ್ದೇಶಪೂರ್ವಕವಾಗಿ ಅಂಕಪಟ್ಟಿಯಲ್ಲಿ ಶೂನ್ಯ ಬರುವಂತೆ ಮಾಡುವುದು, ಆವಕ ಶಾಖೆಯಲ್ಲಿ ಕೊಟ್ಟ ಅರ್ಜಿಗಳನ್ನು ನಿರ್ಲಕ್ಷ ಮಾಡುವುದು, ವಿದ್ಯಾರ್ಥಿಗಳ ಅರ್ಜಿಯನ್ನು ತಿಂಗಳುಗಟ್ಟಲೆ ಮುಂದೂಡುವುದು. ಕುಂಟು ನೆಪವೊಡ್ಡಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಫಲಿತಾಂಶ ತಡೆವೊಡ್ಡುವುದು. ಪದವಿ ಪರೀಕ್ಷೆ ಕೇಂದ್ರಗಳಿಗೆ ಅರ್ಹತೆ ಇಲ್ಲದ ಉಪನ್ಯಾಸಕರನ್ನು ಬಾಹ್ಯ ಮೇಲ್ವಿಚಾರಕರಾಗಿ ನೇಮಕ ಮಾಡುತ್ತಿದ್ದಾರೆ. ಹೊಸ ಪದವಿ ಕಾಲೇಜುಗಳಿಗೆ ನಿಯಮ ಮೀರಿ ಅರ್ಹತೆ ಮತ್ತು ಸೌಲಭ್ಯಗಳನ್ನು ಇಲ್ಲದಿದ್ದರೂ ಅನುಮತಿ ನೀಡಲಾಗುತ್ತಿದೆ. ವಿದಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಅಂಕಪಟ್ಟಿಗಳು ಕೊಡುತ್ತಿಲ್ಲ.
ಎಲ್ಲಾ ಸಮಸ್ಯೆಗಳನ್ನು ನಿವಾರಿಸದೇ ಹೋದರೆ ಎ.ಬಿ.ವಿ.ಪಿ. ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಉಗ್ರವಾದ ಹೋರಾಟ ಮಾಡಲಾಗುವುದೆಂದು ಎ.ಬಿ.ವಿ.ಪಿ. ಬೀದರ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಕುಲಪತಿಗಳು, ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ರವರಿಗೆ ದಿನಾಂಕ: 10-09-2024 ರಂದು ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ಸಂಚಾಲಕರಾದ ಮಹೇಶ ಕೌರ್, ನಗರ ಕಾರ್ಯದರ್ಶಿ ಆನಂದ ಅಮದಾಬಾದೆ, ನಗರ ಸಹ ಕಾರ್ಯದರ್ಶಿ ಪವನ, ನಾಗರಾಜ, ಹೋರಾಟ ಪ್ರಮುಖ ಅಭಿಷೇಕ ಶಂಭು, ವಿದ್ಯಾರ್ಥಿನಿ ಪ್ರಮುಖ ರಚನಾ, ಕಲಾಮಂಚ ಪ್ರಮುಖ ಮಮತಾ, ಕಾಲೇಜು ಕಮಿಟಿ ವಿದ್ಯಾರ್ಥಿಗಳಾದ ಆತೀಶ ವರ್ಮಾ, ಚಾಂದ ಪಾಶಾ, ನಾಗೇಶ, ಪಾಂಡುರಂಗ, ಮಮತಾ ವಸಂತ, ಕಾವೇರಿ, ಪೂಜಾ, ಅಪೂರ್ವ, ಪ್ರಾರ್ಥನಾ, ಸುಕನ್ಯಾ, ಅಂಬಿಕಾ ಇನ್ನೀತರ ಕಾರ್ಯಕರ್ತರು ಉಪಸ್ಥಿತರಿದ್ದರು.