ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ, ಡಿಸಿ ಮನವಿ ಸಲ್ಲಿಕೆ
ವಿಜಯಪುರ,ಸೆ.11:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನ ವೇದಿಕೆ ಸಂಘಟನೆ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಖಾತೆ ಸಚಿವರಿಗೆ ಮನವಿ ಸಲ್ಲಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ, ಶಿಥಿಲಗೊಂಡ ಕಟ್ಟಡಗಳ ದುರಸ್ಥಿಗೆ ಬಜೆಟ್‍ನಲ್ಲಿ ಪ್ರತ್ಯೇಕ ಅನುದಾನ ನೀಡಬೇಕು,
ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ನಲ್ಲಿ ಸಂಪರ್ಕ ಹೊಂದಿದ ವಿದ್ಯುತ್ ಚಾಲಿತ ಕುಡಿಯುವ ನೀರಿನ ಫಿಲ್ಟರ್ ಅನ್ನು ಒದಗಿಸಬೇಕು. ರಾಜ್ಯದ ಎಲ್ಲ ಅಂಗನವಾಡಿಗಳಿಗೆ ಪ್ರತ್ಯೇಕ ಅಡುಗೆ ಮನೆ ಹಾಗೂ ಸ್ಟೋರ್ ರೂಮ್ ಒದಗಿಸಿ ಶಾಲಾ ಪೂರ್ವ ಶಿಕ್ಷಣದ ಗುಣಮಟ್ಟ ಹಾಗೂ ಮಕ್ಕಳ ಸುರಕ್ಷತೆ ಖಚಿತ ಪಡಿಸಬೇಕು. ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳಿಗೆ ಆಟವಾಡಲು ಹೊರಾಂಗಣ ವ್ಯವಸ್ಥೆ ಒದಗಿಸಲು ಸ್ಥಳೀಯ ಸರ್ಕಾರಗಳಿಗೆ ಆದೇಶಿಸಬೇಕು ಇವೇ ಮುಂತಾದ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವಿಜಯಪುರ ಜನವೇದಿಕೆ ನಾಯಕರಾದ ಅಕ್ರಂ ಮಾಶ್ಯಾಳಕರ, ಹಮೀದಾ ಪಟೇಲ್, ಮುತ್ತು ಭೋವಿ, ನಿರ್ಮಲಾ ಹೊಸಮನಿ, ಮಡಿವಾಳಪ್ಪ ಎಡ್ರಾಮಿ, ಲಕ್ಷ್ಮೀ ಮಾದರ, ಲಕ್ಷ್ಮೀ ಸನಪ, ರಮೇಶ ರಾಠೋಡ, ದೀಪಾ ರಾಠೋಡ, ಮಹಾನಂದಾ ಹೊಸಮನಿ, ಇಮಾಮ ಮುಲ್ಲಾ, ಮೋಟಾಬಾಯಿ ರಾಠೋಡ, ರಾಮನಗೌಡ ಬಿರಾದಾರ, ಬಸವರಾಜ ಕುಂಟೋಜಿ, ಸುಮಂಗಲಾ ಬಬಲಾದ, ಶಾಂತಾಬಾಯಿ ನಾಟೀಕಾರ ಮುಂತಾದವರು ಉಪಸ್ಥಿತರಿದ್ದರು.