ಅದ್ದೂರಿಯಾಗಿ ನಡೆದ ಮಾರ್ಕಬ್ಬಿನಹಳ್ಳಿ ಮಲ್ಲಿಕಾರ್ಜುನ ದೇವರ ಜಾತ್ರೆ
ದೇವರಹಿಪ್ಪರಗಿ: ಸೆ.11:ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆ ಸೋಮವಾರ ಅದ್ದೂರಿಯಾಗಿ ಜರುಗಿತು.
ಶ್ರಾವಣ ಮಾಸ ಹಾಗೂ ಜಾತ್ರೆ ನಿಮಿತ್ಯ ಮಡಿವಾಳೇಶ್ವರ ಮಹಾಸ್ವಾಮಿಗಳು ಗದ್ದಗಿಮಠ ಕೊಕಟನೂರ ಅವರಿಂದ ಕಳೆದು ಒಂದು ತಿಂಗಳಿಂದ ನಡೆದ ಶರಣ ಬಸವಶ್ವರ ಪುರಾಣ ಮಂಗಲ ನಡೆಯಿತು.
ಮಲ್ಲಿಕಾರ್ಜುನ ದೇವರ ಪಲಕ್ಕಿ ಉತ್ಸವ ಗಂಗಸ್ಥಳಕ್ಕೆ ತಲುಪಿದ ನಂತರ ಮಲ್ಲಿಕಾರ್ಜುನ ದೇವರ ಮೂರ್ತಿಗೆ ಗಂಗಾಸ್ನಾನ ವಿಶೇಷ ಪೂಜೆ ಸಲೀಸಾಲಾಯಿತು.ನಂತರ ಆರಂಭಗೊಂಡ ಮೆರವಣಿಗೆ ಗ್ರಾಮದಲ್ಲಿ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪಿತು.ಕುಂಭ ಕಳಸ,ಮಡಿ ಸಿದ್ದೇಶ್ವರ ವಾಲಗ ಸಂಘ ಜಾಲವಾದ ಇವರಿಂದ ಡೊಳ್ಳು ಕುಣಿತ, ಕರಡಿ ಮಜಲು,ಹಲಗಿ ವಿವಿಧ ವಾದ್ಯ ಮೇಳದೊಂದಿಗೆ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮಲ್ಲಿಕಾರ್ಜುನ ದೇವರ ನಾಮಸ್ಮರಣೆ ಜಯ ಘೋಷಣೆ ಮೂಲಕ ಭಕ್ತಿ ಭಾವಕ್ಕೆ ಸಾಕ್ಷಿಯಾದರು.ನಾನಾ ಕಡೆಯಿಂದ ಬಂದ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಅಗ್ನಿ ಕುಂಡದ ಮುಂದೆ ಮಲ್ಲಿಕಾರ್ಜುನ ದೇವರ ಪಲಕ್ಕಿ ಮುಂದಗಡೆ ಪುರವಂತರು ಭಾಗವಹಿಸಿದ್ದರು. ಕಾವಿ ಧೋತರ, ಕಾವಿ ಪೇಟ, ಕಿವಿಗೆ ರುದ್ರಾಕ್ಷಿ, ಹಣೆಗೆ ವಿಭೂತಿ, ಕತ್ತಿಗೆ ರುದ್ರಾಕ್ಷಿ ಮಾಲೆ, ಕೈಗೆ ರುದ್ರಾಕ್ಷಿ, ಸೊಂಟಕ್ಕೆ ಬಣ್ಣದ ಬಟ್ಟೆ ಧರಿಸಿ ಬಲಗೈಯಲ್ಲಿ ಖಡ್ಗ, ಎಡಗೈಯಲ್ಲಿ ನಿಂಬೆ ಹಣ್ಣಿನ ಶಸ್ತ್ರ ಹಿಡಿದ ಪುರವಂತರು ಎರಡು ಕೈ ನಾಲಿಗೆ ಶಸ್ತ್ರಗಳನ್ನು ಚುಚ್ಚಿಕೊಂಡು ಸಾಕ್ಷಾತ ವೀರಭದ್ರೇಶ್ವರನ ಪವಾಡ ಪ್ರದರ್ಶಿಸಿದರು.ಪುರವಂತರು, ಹರಕೆ ಹೊತ್ತ ಭಕ್ತಾದಿಗಳು ಮಡಿಯಿಂದ ಅಗ್ನಿ ಕುಂಡಕ್ಕೆ ಹಾಯ್ದರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಮಂಗಳವಾರ ಪಂಚಾಯತಿ ಆವರಣದಲ್ಲಿ ಮಧ್ಯಾಹ್ನ ಒಂದು ಘಂಟೆಗೆ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು.ಸ್ಪರ್ಧಿಗಳು ಹೆಚ್ಚು ತೂಕದ ಕಲ್ಲು ಎತ್ತಿದಾಗ ಯುವ ಸಮುದಾಯ ಕೆಕೆ ಸಿಳ್ಳೆ ಹೊಡೆಯುವ ಮೂಲಕ ಸ್ಪರ್ಧಿಗಳಿಗೆ ಉತ್ಸಾಹ ಮೂಡಿಸಿತು.
ಅದೇ ದಿನ ಸಾಯಂಕಾಲ ಜಂಗಿ ಕುಸ್ತಿ ಜರುಗಿದವು.ರಸಮಂಜರಿ ಕಾರ್ಯಕ್ರಮ, ಹೆತ್ತ ತಾಯಿ ಹಾಲು ಉಷವಾಯಿತು ಎಂಬ ಸುಂದರ ಸಾಮಾಜಿಕ ನಾಟಕ ಏರ್ಪಡಿಸಲಾಗಿತ್ತು.ಶ್ರಾವಣ ಮಾಸ ಪುರಾಣದ ಸಮಯದಲ್ಲಿ ಒಂದು ತಿಂಗಳ ಕಾಲ ಪ್ರತಿ ದಿನ ರಾತ್ರಿ ಅನ್ನಪ್ರಸಾದ ನಡೆಯಿತು.
ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅತ್ಯಂತ ಯಶಸ್ವಿಯಾಗಿ ನಡೆಯಿತು,ಮಾರ್ಕಬ್ಬಿನಹಳ್ಳಿ ಗ್ರಾಮದವರು ಹಾಗೂ ನೆರೆ ಹೊರೆಯ ಎಲ್ಲ ಗ್ರಾಮಸ್ಥರು ಈ ಜಾತ್ರೆಗೆ ಸಾಕ್ಷಿಯಾದರು.