ದಣ್ಣೂರ ಗ್ರಾಪಂ ನಡೆಸಿದ ಪ್ರಥಮ ಕೆಡಿಪಿ-ಅಧಿಕಾರಿ ಗೈರಿಗೆ ನೋಟಿಸ ಸರ್ಕಾರಿ ಕಾರ್ಯಕ್ರಮ ಪರಿಣಾಮಕಾರಿ ಅನುಷ್ಠಾನಕ್ಕೆ ಸಮನ್ವಯತೆ ಅಗತ್ಯ
ಆಳಂದ:ಸೆ.11: ತಾಲೂಕಿನಲ್ಲೇ ಮೊದಲು ಬಾರಿಗೆ ದಣ್ಣೂರ ಗ್ರಾಮ ಪಂಚಾಯತ್‍ನಲ್ಲಿ ಮಂಗಳವಾರ ಅಧ್ಯಕ್ಷೆ ಹಸೀನಾಬಿ ಮಹಿಬೂಬಸಾಬ ಕೋರಳ್ಳಿ ಅವರು ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಕೆಡಿಪಿ ಸಭೆಯಲ್ಲಿ ವ್ಯಾಪ್ತಿಯ ಸಮಸ್ಯಾತ್ಮಕ ವಿಷಯ ಹಾಗೂ ಸರ್ಕಾರಿ ಕಾರ್ಯಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆದು ಗಮನ ಸೆಳೆದಿದೆ.
ಈ ನಡುವೆ ಅಧ್ಯಕ್ಷೆ ಹಸೀನಾಬಿ ಅವರು ಮಾತನಾಡಿ, ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ಯ ಕಾಯ್ದೆ 1993ರಂತೆ ಗ್ರಾಮ ಪಂಚಾಯತ ಅಡಿಯಲ್ಲಿ ಬರುವ ಎಲ್ಲಾ ಇಲಾಖೆ ಅಧಿಕಾರಿಗಳು ವಲಯಮಟ್ಟದಲ್ಲಿ ಕಾರ್ಯರ್ನಿಹಿಸಲು ಹಿಂದೇಟು ಹಾಕಿದರೆ ಶಿಸ್ತಿನ ಕ್ರಮಕ್ಕೆ ಶಿಫಾರಸು ಕೈಗೊಳ್ಳಲಾಗುವುದು. ಸಭೆ ಕುರಿತು ಅಧಿಕೃತವಾಗಿ ನೋಟಿಸ್ ನೀಡದ ಮೇಲೂ ಗೈರಾದ ಹಲವು ಅಧಿಕಾರಿಗಳನ್ನು ಕಾರಣಕೇಳಿ ನೋಟಿಸ್ ಜಾರಿಗೊಳಿಸುವಂತೆ ಹಾಜರಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರವೀಣ ಉಡಗಿ ಅವರಿಗೆ ಸೂಚನೆ ನೀಡಿದ ಪ್ರಸಂಗ ನಡೆದಿದೆ.
ಮಳೆಯಿಂದಾಗಿ ರಸ್ತೆಗಳ ಹದಗೇಟ್ಟಿವೆ. ವಿದ್ಯುತ್ ಸಂಪರ್ಕ ಅವ್ಯವಸ್ಥೆಯಿಂದ ಕೂಡಿದೆ. ಕುಡಿಯುವ ನೀರು ಸರಬರಾಜು ಸಂಬಂಧಿತ ಅಧಿಕಾರಿಗಳು ಗೈರಾಗಿದ್ದು, ಅರ್ಹ ಬಡ ಫಲಾನುಭವಿಗಳು ಮಾಸಾಶನ ವಂಚಿತರಾಗಿದ್ದು, ರೇಷನ್ ಕಾರ್ಡ್ ಗ್ರಾಹಕರ ಲೆಕ್ಕವಿಲ್ಲ. 10ನೇ ಫಲಿತಾಂಶ ಕುಸಿತಕಂಡಿದೆ ಸಂಬಂಧಿತರು ಸಭೆಗೆ ಬಂದು ಸಮಸ್ಯೆ ಆಲಿಸಿ ನಿವಾರಣೆಗೆ ಯತ್ನಿಸಬೇಕು.
ಆದರೆ ಬಾರದೆ ಇದ್ದರೆ ಸಮಸ್ಯೆ ಹೇಗೆ ಗೊತ್ತಾಗುತ್ತದೆ ಎಂದು ಸಿಡಿಮಿಡಿಗೊಂಡು ಗೈರಾಗಿದ್ದ ಆರೋಗ್ಯ, ಪಶು, ಕೃಷಿ, ಸಾಮಾಜಿಕ ಅರಣ್ಯ, ಜಿಪಂ, ಆಹಾರ, ಕೈಗಾರಿಕ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು.
ಸ್ಥಳೀಯ ಮಟ್ಟದ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೂಡಿದಾಗ ಮಾತ್ರ ಸರ್ಕಾರಿ ಕಾರ್ಯಕ್ರಮಗಳು ಪರಿಣಾಮಕಾರಿ ಅನುಷ್ಠಾನ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಹಾಜರಿದ್ದ ಕೆಲ ಇಲಾಖೆಯ ಸಿಬ್ಬಂದಿಗಳಿಂದ ವರದಿ ಆಲಿಸಿದರು. ಅರ್ಹರಿಗೆ ಮಾಶಾಸನ ತಲುಪುತ್ತಿಲ್ಲ ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಜನಸ್ಪಂದನಾ ಹಮ್ಮಿಕೊಂಡು ಸಮಸ್ಯೆ ನಿವಾರಣೆಗೆ ಸೂಚನೆ ನೀಡದ ಹಿನ್ನೆಲೆಯಲ್ಲಿ ನಾಳೆಯ ಜನಸ್ಪಂದನಾ ನಡೆಸುವ ಕುರಿತು ವಿಎ ಮಹಿತಿ ನೀಡಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ನಡೆದಿಲ್ಲ. ಮುಂಜಾಗೃತ ಕ್ರಮವಹಿಸಲಾಗುತ್ತಿದೆ ಎಂದು ನರೋಣಾ ಠಾಣೆಯ ಎಎಸ್‍ಐ ಕಲಾಸ್ ಅವರು ವರದಿ ಮಂಡಿಸಿದರು.
ಹಿರಿಯ ಪಶು ವೈದ್ಯ ನಿರೀಕ್ಷಕ ಧರ್ಮಲಿಂಗ ಸುಣಗಾರ ಅವರು, ಜಾನುವಾರು ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ನೀಡಿದ ಬಗ್ಗೆ ವಿವರಿಸಿ ಜಾನುವಾರ ಗಣತಿ ಕೈಗೊಳ್ಳಲಾಗುತ್ತಿದೆ ಎಂದರು.
ಕಂದಾಯ ಇಲಾಖೆ ಗ್ರಾಮ ಆಡಳಿತಾಧಿಕಾರಿ ಕಾಶಿನಾಥ ಅವರು, ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲ ಅರ್ಹರಿಗೆ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದಾಗ ಗ್ರಾಪಂ ಸದಸ್ಯ ಅನೀಲ ಜಾಧವ ಅವರು, ಮಧ್ಯ ಪ್ರವೇಶಿಸಿ ಕಂದಾಯ ಇಲಾಖೆಯ 50 ಎಕರೆ ಗೋಮಾಳ ಅಭಿವೃದ್ದಿಗೆ ಮತ್ತು ಸ್ಮಶಾನ ಭೂಮಿ ಅವೃದ್ಧಿಗೆ ಹದ್ದುಬಸ್ತ್‍ಮಾಡಿಕೊಡಬೇಕು ಎಂದು ಕೇಳಿದರು.
ಹಾಜರಿದ್ದ ನರೋಣಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತೌಸೀಫ್ ವರದಿ ಮಂಡಿಸಿದರು. ಆಸ್ಪತ್ರೆಯಲ್ಲಿ ಶೇ100 ರಷ್ಟು ಹೆರಿಗೆ ಕೈಗೊಳ್ಳಲಾಗುತ್ತಿದೆ. ಶಿಶು ಮರಣ ತಪಿದೆ. ಶೂನ್ಯಯಿಂದ 5 ವರ್ಷದ ಮಕ್ಕಳಿಗೆ ಲಸಿಕೆ ನೀಡುವುದ ಜೊತೆಗೆ ಇಲಾಖೆ ಯೋಜನೆ ಅನುಷ್ಠಾನ ಪ್ರಗತಿಯಲಿದೆ ಎಂದು ವರದಿ ಮಂಡಿಸಿದರು.
ತೋಟಗಾರಿಕೆ ಇಲಾಖೆ ಎಎಚ್‍ಒ ಶಿವಾನಂದ ಅವರು, ತೋಟಗಾರಿಕೆ ಬೆಳೆಗಾರರಿಗೆ ಇಲಾಖೆಯ ಸೌಲಭ್ಯಗಳನ್ನು ವಿತರಿಸಿದ ಮಾಹಿತಿ ನೀಡಿ ಆಸಕ್ತ ಸಣ್ಣ ರೈತರಿಗೆ ಸೌಲಭ್ಯ ಒದಗಿಸಲು ಅವಕಾಶವಿದೆ ಎಂದರು. ಈ ವೇಳೆ ಅಧ್ಯಕ್ಷೆ ಹಸೀನಾಬಿ ಅವರು, ಗ್ರಾಪಂ ಉದ್ಯೋಗ ಖಾತ್ರಿ ಕ್ರಿಯಾಯೋಜನೆ ಜೊತೆಗೆ ತೋಟಗಾರಿಕೆ ಇಲಾಖೆಯ ಕಾಮಗಾರಿಗಳನ್ನು ಹೊತೆಯಲ್ಲೇ ಅನುಮೋದನೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆ ಮಹಾದೇವ ಮಠಪತಿ ಅವರು, ಗ್ರಾಪಂ ವ್ಯಾಪ್ತಿಯಲ್ಲಿನ ಗರ್ಭೀಣಿಯರು, ಬಾಣಂತಿಯರ ಹಾಗೂ ಮಕ್ಕಳ ಸಂಖ್ಯೆ ವಿವರಿಸಿ ಹೆರಿಗೆ ಮೊದಲು ಮತ್ತು ನಂತರ ಇಲಾಖೆಯಿಂದ ನೀಡುವ ಪೌಷ್ಠಿಕ ಆಹಾರ ವಿತರಣೆ ಜಾರಿಯಲಿದೆ ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರವೀಣ ಉಡಗಿ ಅವರು ಸಭೆ ನಿರ್ವಹಿಸಿ ಇಲಾಖೆಯ ಹಾಜರಿದ್ದ ಸಿಬ್ಬಂದಿಗಳ ನಡುವೆ ಸಮನ್ವಯತೆ ಸಾಧಿಸಿ ಸಭೆ ಯಶಸ್ವಿಗೊಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಮೀನಾಕ್ಷಿ ಬಾಬುರಾವ್ ಮತ್ತು ಸದಸ್ಯರು, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಪಂ ಸಿಬ್ಬಂದಿಗಳಿದ್ದರು.