ಕೋಟೆ ಕ್ಯಾಂಟೀನಗೆ ಉತ್ತಮ ಪ್ರತಿಕ್ರಿಯೆ
ಬೀದರ್:ಸೆ.11: ಇಲ್ಲಿಯ ಐತಿಹಾಸಿಕ ಕೋಟೆಯಲ್ಲಿ ಆರಂಭಿಸಿರುವ ಕ್ಯಾಂಟೀನಗೆ ಪ್ರವಾಸಿಗರಿಂದ
ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕೋಟೆ ವೀಕ್ಷಿಸಲು ಬರುತ್ತಿರುವ ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ
ಪ್ರವಾಸಿಗರು ‘ಶಾಹೀನ್ ಫುಡ್ ಕೋರ್ಟ್’ಗೆ ಭೇಟಿ ನೀಡುತ್ತಿದ್ದಾರೆ.
ಕ್ಯಾಂಟೀನ್ ಆಸನಗಳಲ್ಲಿ ಕೆಲ ಹೊತ್ತು ಕುಳಿತು ದಣಿವಾರಿಸಿಕೊಳ್ಳುತ್ತಿದ್ದಾರೆ. ಹಸಿರು
ವಾತಾವರಣದ ಮಧ್ಯೆ ವಿವಿಧ ಬಗೆಯ ಖಾದ್ಯಗಳ ಸವಿ ಸವಿಯುತ್ತಿದ್ದಾರೆ.
ಕೋಟೆಯಲ್ಲಿ ಈ ಹಿಂದೆ ಇದ್ದ ಕ್ಯಾಂಟೀನ್ ಬಂದ್ ಆಗಿದ್ದ ಕಾರಣ ವಿವಿಧೆಡೆಯ ಪ್ರವಾಸಿಗರು
ಉಪಾಹಾರ, ಬಿಸ್ಕತ್, ಕುಡಿಯುವ ನೀರಿನ ಬಾಟಲಿ ಸಹ ಸಿಗದೆ ತೊಂದರೆ
ಅನುಭವಿಸುತ್ತಿದ್ದರು. ಪ್ರವಾಸಿಗರ ಅನುಕೂಲಕ್ಕಾಗಿ ಶಾಹೀನ್ ಫುಡ್ ಕೋರ್ಟ್
ಆರಂಭಿಸಲಾಗಿದೆ ಎಂದು ಶಾಹೀನ್ ಸಮೂಹ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ಹಸೀಬ್
ತಿಳಿಸಿದರು.
ನಿತ್ಯ ಕ್ಯಾಂಟೀನಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ರಜೆ ದಿನ ಹಾಗೂ
ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ ಇರುತ್ತಿದೆ ಎಂದು ಹೇಳಿದರು.
ಬೀದರ್ ಕೋಟೆ ದಕ್ಷಿಣ ಭಾರತದ ಭದ್ರ ಕೋಟೆಗಳಲ್ಲಿ ಒಂದಾಗಿದೆ. ಐದೂವರೆ ಎಕರೆ
ವಿಸ್ತೀರ್ಣದ ಕೋಟೆಯಲ್ಲಿ ಹಲವು ಅಪರೂಪದ ಸ್ಮಾರಕಗಳು ಇವೆ. ಅವುಗಳ ವೀಕ್ಷಣೆಗೆ
ಗಂಟೆಗಳೇ ಬೇಕಾಗಲಿವೆ. ಇಂಟರ್ನೆಟನಲ್ಲಿ ಕೋಟೆಯ ಮಾಹಿತಿ ಪಡೆದು, ಆಸಕ್ತಿಯಿಂದ
ವೀಕ್ಷಣೆಗೆ ಬರುವವರಿಗೆ ಕ್ಯಾಂಟೀನನಿಂದ ಬಹಳ ಅನುಕೂಲವಾಗಿದೆ ಎಂದು ತಿಳಿಸಿದರು.