ವರದಿ ಆಧರಿಸಿ ಮುಂದಿನ ಕ್ರಮ
ಭಾಲ್ಕಿ:ಸೆ.11: ತಾಲೂಕಿನ ಕೋನಮೇಳಕುಂದಾ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಜತೆಗೆ ಪ್ರಾಂಶುಪಾಲ, ಶಿಕ್ಷಕರು ಅನುಚಿತ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಮತ್ತು ಎಸ್ಪಿ ಪ್ರದೀಪ ಗುಂಟಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಗ್ರಾಮದ ವಸತಿ ಶಾಲೆಗೆ ಮಂಗಳವಾರ ಭೇಟಿ ನೀಡಿದ ಅಧಿಕಾರಿಗಳ ತಂಡ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾಹಿತಿ ಕಲೆಹಾಕಿತು.
ಶಾಲೆಯಲ್ಲಿ ಸರಿಯಾಗಿ ಪಾಠ ಬೋಧನೆ ನಡೆಯದಿರುವುದು ಮತ್ತು ಅನುಚಿತ ವರ್ತನೆ ಬಗ್ಗೆ ಆರೋಪ ಮಾಡಿದ ವಿದ್ಯಾರ್ಥಿನಿಯರ ಜತೆಗೆ ಡಿಸಿ ಶಿಲ್ಪಾ ಶರ್ಮಾ ಅವರು ಕೆಲಕಾಲ ಗೌಪ್ಯವಾಗಿ ಮಾತನಾಡಿ ಮಾಹಿತಿ ಪಡೆದು ಕೊಂಡರು.
ನಂತರ ತರಗತಿ ಕೋಣೆಗಳಿಗೆ ಭೇಟಿ ನೀಡಿದ ಅವರು ವಿಜ್ಞಾನ ಸೂತ್ರಗಳು ಮತ್ತು ಇಂಗ್ಲಿಷ್ ಸಂಬಂಧಿತ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿದರು. ವಿದ್ಯಾರ್ಥಿಗಳಿಂದ ಸಮರ್ಪಕ ಉತ್ತರ ಬರದ ಹಿನ್ನೆಲೆಯಲ್ಲಿ ವಿಜ್ಞಾನ ಶಿಕ್ಷಕರ ವಿರುದ್ಧ ಅಸಮಾಧಾನ ಹೊರಹಾಕಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿದ್ಯಾರ್ಥಿನಿಯರ ಜತೆಗೆ ಮಾತನಾಡಿ ಮಾಹಿತಿ ಕಲೆ ಹಾಕಿದ್ದೇನೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ,
ಮಾಧ್ಯಮ ವರದಿ ಆಧರಿಸಿ ವಸತಿ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದೇನೆ. ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಎಸ್ಪಿ ಪ್ರದೀಪ ಗುಂಟಿ ಮಾತನಾಡಿ, ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸೂಕ್ತ ಭದ್ರತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಅಪರಿಚತರಿಗೆ ಶಾಲಾ ಪ್ರವೇಶ ನಿಷೇಧಿಸಬೇಕು ಎಂದರು. ಜಿಪಂ ಸಿಇಒ ಡಾ.ಗಿರೀಶ ಬದೋಲೆ ಮಾತನಾಡಿ
ಇಲ್ಲಿಯ ಶಿಕ್ಷಕರನ್ನು ಬೇರೆಯೆಡೆ ವರ್ಗಾವಣೆ ಮಾಡುವಂತೆ ದೂರು ಬಂದಿವೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕ್ಲಾಸ್ ಟೀಚರ್‍ಗಳಿಗೆ ನೋಟಿಸ್ ನೀಡಲು ಸೂಚನೆ
ಇದೇ ವೇಳೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಹಾಜರಾತಿ ಪುಸ್ತಕ ಪರಿಶೀಲಿಸಿದರು. ಈ ಸಂದರ್ಭದಲ್ಲಿ ತರಗತಿ ಶಿಕ್ಷಕರು ಹಾಜರಾತಿ ಪುಸ್ತಕ ಸರಿಯಾಗಿ ನಿರ್ವಹಣೆ ಮಾಡದಿರುವುದನ್ನು ಕಂಡು ಗರಂ ಆದರು. ಕೆಲ ಶಿಕ್ಷಕರು ಹಾಜರಾತಿ ಪುಸ್ತಕದಲ್ಲಿ ಬೆಳಿಗ್ಗೆ, ಮಧ್ಯಾಹ್ನದ ಸಹಿ ಏಕಕಾಲಕ್ಕೆ ಮಾಡಿರುವುದನ್ನು ಕಂಡು ತರಾಟೆಗೆ ತೆಗೆದು ಕೊಂಡರು. 6 ರಿಂದ 10ನೆಯ ತರಗತಿ ವಿದ್ಯಾರ್ಥಿಗಳ ಹಾಜರಾತಿ ಪುಸ್ತಕ ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ವರ್ಗ ಶಿಕ್ಷಕರಿಗೆ ಶೋಕಾಸ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿಕ್ಷಕರ ವರ್ಗಾವಣೆಗೆ ಒತ್ತಾಯ
ವಸತಿ ಶಾಲೆಯಲ್ಲಿ ಕರ್ತವ್ಯ ಲೋಪ ಎಸಗುತ್ತಿರುವ ಕಾಯಂ ಶಿಕ್ಷಕರು, ಸ್ಥಳೀಯ ಹೊರ ಗುತ್ತಿಗೆ ಶಿಕ್ಷಕರನ್ನು ವರ್ಗಾವಣೆ ಮಾಡುವಂತೆ ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ ಮಾನಕಾರ ಸೇರಿ ಗ್ರಾಮದ ಯುವಕರು ಒತ್ತಾಯಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
ಕೆಲ ಶಿಕ್ಷಕರು ಸ್ವಪ್ರತಿಷ್ಠೆಗಾಗಿ ತಮ್ಮದೇ ಗುಂಪು ಸೃಷ್ಟಿಸಿಕೊಂಡು ಜಗಳ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಶಾಲಾ ಪರಿಸರ ಹಾಳಾಗುತ್ತಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಕೂಡಲೇ ಇಂತವರನ್ನು ವರ್ಗಾಯಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಶಿವರಾಜ ಹಂಪಾ, ರಾಜಕುಮಾರ ಚಲ್ವಾ, ಪಂಡರಿ ಮೇತ್ರೆ, ಪ್ರವೀಣ ಗಾಯಕವಾಡ ಸೇರಿದಂತೆ ಹಲವರು ಇದ್ದರು.