ಪ್ರತಿಭಟನೆ
ಲಕ್ಷ್ಮೇಶ್ವರ,ಸೆ11: ಪಟ್ಟಣದ ಪುರಸಭೆಯ ಮುಂದೆ ಮತ್ತು ಒಳಗಡೆ ಒಂದರಂತೆ ಒಂದು ಸರದಿ ಪ್ರತಿಭಟನೆಗಳು ಜರುಗಿದವು.
ಕಳೆದ ಅನೇಕ ತಿಂಗಳಿನಿಂದ ನೀರಿನ ಸಮಸ್ಯೆ ಇದ್ದರೂ ಸಹನೆಯಿಂದ ಇದ್ದ ಮಹಿಳೆಯರು ಆಕ್ರೋಶಗೊಂಡು ನೂರಾರು ಸಂಖ್ಯೆಯಲ್ಲಿ ಪುರಸಭೆಗೆ ದೌಡಾಯಿಸಿ ಸಮರ್ಪಕ ನೀರು ವ್ಯವಸ್ಥೆ ಮಾಡುವಂತೆ ಪುರಸಭೆಗೆ ಆಗ್ರಹಿಸಿದರು.
ಪಟ್ಟಣದ ಯಾವ ವಾರ್ಡುಗಳಲ್ಲಿಯೂ ಸಮರ್ಪಕವಾಗಿ ನೀರು ಬರುತ್ತಿಲ್ಲ ಎಂದು ಮೊದಲು 10ನೇ ವಾರ್ಡಿನ ನಿವಾಸಿಗರು ಪುರಸಭೆಯ ಮುಂದೆ ದಿಡೀರ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ಮಹಿಳೆಯರು ನಾವು ನೀರಿಗಾಗಿ ಯಾರನ್ನು ಕೇಳಬೇಕು ಮಳೆಗಾಲದಲ್ಲಿಯೇ ತಿಂಗಳಿಗೊಮ್ಮೆ 20 ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದೆ ಕೇಳಿದರೆ ಏನಾದರೂ ಸಬುಬು ಹೇಳುತ್ತೀರಿ ಸಹನೆಗೂ ಮಿತಿ ಇದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಆಗ ಪುರಸಭೆಯ ಅಧ್ಯಕ್ಷರ ಕೊಠಡಿಯಲ್ಲಿ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ ಉಪಾಧ್ಯಕ್ಷ ಫೀರ್ ದೂಶ ಆಡೂರ ಮುಖ್ಯ ಅಧಿಕಾರಿ ಮಹೇಶ್ ಹಡಪದ ಅವರ ಸಮ್ಮುಖದಲ್ಲಿ ಬಿಸಿ ಚರ್ಚೆ ನಡೆಯಿತು. ಕೊನೆಗೆ ಇನ್ನು ಎರಡು ಮೂರು ದಿನಗಳಲ್ಲಿ ಸಮರ್ಪಕ ನೀರು ಬಿಡಲು ಕ್ರಮ ಕೈಗೊಳ್ಳುವದಾಗಿ ಹೇಳಿದರು.
ಅದೇ ರೀತಿ ಮುಖ್ಯ ಅಧಿಕಾರಿಗಳ ಕೊಠಡಿಯಲ್ಲಿ ಸದಸ್ಯೆ ವಾಣಿ ಹತ್ತಿಯವರ ನೇತೃತ್ವದಲ್ಲಿ ಮಹಿಳೆಯರು ವಾರ್ಡಿನಲ್ಲಿ ಮೂಲಭೂತ ಸಮಸ್ಯೆಗಳು ಕಾಡುತ್ತಿವೆ ಸೂಕ್ತ ಪರಿಹಾರ ನೀಡದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರವೀಣ್ ಬಾಳಿಕಾಯಿ ಸಾಹೇಬ್ ಜಾನ್ ಹವಾಲ್ದಾರ್ ಮಹದೇವಪ್ಪ ಅಣ್ಣಿಗೇರಿ ಶರಣು ಗೋಡಿ ನಾಗೇಶ್ ಅಮರಾಪುರ ಸುರೇಶ ಹಟ್ಟಿ ಪ್ರಕಾಶ ಮಾದನೂರು ಸೇರಿದಂತೆ ಅನೇಕರಿದ್ದರು.