ಹಣ ಹಂಚಿ ಗೆದ್ದಿರುವ ತುಕಾರಾಂ ಗೆಲುವು ಪ್ರಶ್ನಿಸಿ ಶ್ರೀರಾಮುಲು ಹೈಕೋರ್ಟ್ ನಲ್ಲಿ ದಾವೆ: ರಾಧಾ ಮೋಹನ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.11:  ರಾಜ್ಯದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಚುನಾವಣೆಯಲ್ಲಿ ಅಕ್ರಮವಾಗಿ ಬಳಸಿ, ಹೆಂಡ ಹಂಚಿ ಮತದಾರರ ಮೇಲೆ ಪ್ರಭಾವ ಬೀರಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ. ಹಣ, ಹಂಚಿ ಗೆದ್ದಿರುವ ಸಂಸದ ಈ.ತುಕಾರಾಂ ಗೆಲುವನ್ನು ಪ್ರಶ್ನಿಸಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಹೈಕೋರ್ಟ್ ನಲ್ಲಿ ದಾವೆ ಹೂಡಲಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ಅಗರ್ವಾಲ್ ಹೇಳಿದ್ದಾರೆ.
ಅವರು ಇಂದು ಜಿಲ್ಲೆಯ ಸಂಡೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ. ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ವಾಲ್ಮೀಕಿ ನಿಗಮದ 20.19 ಕೋಟಿ ಹಣ ಬಳಕೆಯಾಗಿದೆ ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ. 1975 ರಲ್ಲೂ ಇದೇ ರೀತಿ ಹಣ, ಹೆಂಡ ಹಂಚಿ ಗೆದ್ದಿದ್ದ ಇಂದಿರಾಗಾಂಧಿಯವರ ಗೆಲುವನ್ನು ಪ್ರಶ್ನಿಸಿ ಕೋರ್ಟ್ ಗೆ ಹೋಗಿತ್ತು. ಕೋರ್ಟ್ ಸದಸ್ಯತ್ವವನ್ನು ರದ್ದು ಪಡಿಸಿತ್ತು.  ಅದಕ್ಕಾಗಿ  ಇಂದಿರಾಗಾಂಧಿ  ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು.  ಸಂಸದ ತುಕಾರಾಂ ಪ್ರಕರಣವೂ ಅದೇ ರೀತಿ ಆಗಲಿದೆ ಎಂದು ರಾಧಾ ಮೋಹನ್ ಅಗರ್ವಾಲ್ ಅಭಿಪ್ರಾಯಪಟ್ಟರು.
ವಾಲ್ಮೀಕಿ ಹಣಗರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ, ಇಡಿ ಚಾರ್ಜ್ ಶೀಟ್ ಸಲ್ಲಿಸಿದೆ. ನಾಗೇಂದ್ರನನ್ನು ರಕ್ಷಣೆ ಮಾಡಲು ಎಸ್ ಐಟಿ ಕ್ಲೀನ್ ಚಿಟ್ ನೀಡಿದೆ. ಇಡಿ ನಾಗೇಂದ್ರ ಅವರೇ ಪ್ರಮುಖ ಆರೋಪಿ ಎಂದಿದೆ.
ಹಗರಣ ಕುರಿತು ಬಿಜೆಪಿ ಆರೋಪ ಮಾಡಿದಾಗ ಸಿಎಂ ಸಿದ್ದರಾಮಯ್ಯ ನಡೆದೇ ಇಲ್ಲ ಎಂದರು. ಬಳಿಕ ಅಧಿವೇಶನದಲ್ಲೇ 89 ಕೋಟಿ ರೂ. ಹಗರಣ ನಡೆದಿದೆ ಎಂದು ಒಪ್ಪಿಕೊಂಡರೆಂದರು.
ಮೂಡಾದಲ್ಲಿ ಬದಲಿ ನಿವೇಶನ ಪಡೆದು ಸುಮಾರು 4 ಸಾವಿರ ಕೋಟಿ‌ ಹಗರಣ ಮಾಡಿದ್ದಾರೆ ಸಿದ್ದರಾಮಯ್ಯ.
ಮಲ್ಲಿಕಾರ್ಜುನ ಖರ್ಗೆ ಅಳಿಯನ ಹೆಸರಲ್ಲೂ ಐದು ಎಕರೆ ಜಮೀನು ಪಡೆದಿದ್ದಾರೆ. ಕಾಂಗ್ರೆಸ್ ಬರೀ ಭ್ರಷ್ಟಾಚಾರದಲ್ಲೇ ತೊಡಗಿದೆ. ಲೋಕಸಭೆ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಸೇರಿ ಎಲ್ಲರೂ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಮಾಜಿ ಸಚಿವ ಬಿ.ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಮಾಜಿ ಸಂಸದ ದೇವೇಂದ್ರಪ್ಪ, ಮುಖಂಡರುಗಳಾದ ಕೆ.ಎಸ್.ದಿವಾಕರ್. ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು ಮೊದಲಾದವರು ಇದ್ದರು.