ಚುನಾವಣೆಗೆ ಅಕ್ರಮ ಬಳಕೆಸಂಸದ ಸ್ಥಾನಕ್ಕೆ ತುಕರಾಂ ರಾಜಿನಾಮೆಗೆ ಆಗ್ರಹ
(ಸಂಜೆವಾಣಿ ವಾರ್ತೆ)
ಬೆಂಗಳೂರು, ಸೆ.11: ರಾಜ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮದ 21 ಕೋಟಿ ರು. ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಖರ್ಚು ಮಾಡಿದ್ದಾಗಿ ಜಾರಿ ನಿರ್ದೇಶನಾಲಯವು  ದೋಷಾರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ತಿಳಿಸಿರುವುದರಿಂದ ಚುನಾವಣಾ ಆಯೋಗವು ಬಳ್ಳಾರಿ ಸಂಸದ ತುಕಾರಾಂ ಅವರನ್ನು ಕೂಡಲೇ ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು  ವಿಧಾನಪರಿ ಷತ್ತಿನ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.
ನಿನ್ನೆ ಮಾಧ್ಯಮಗಳೊಂದಿಗೆ  ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ್ದು ಅಂತ‌ರ್ ರಾಜ್ಯ ಭ್ರಷ್ಟಾಚಾರದ ಹಗರಣವಾಗಿದೆ. ನಿಗಮದ ಹಣವು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಳಕೆ ಆಗಿರುವುದು ಸುಸ್ಪಷ್ಟ. ನಿಗಮದ 187 ರೂ ಹಗರಣದಲ್ಲಿ
ಮಾಜಿ ಸಚಿವ ಬಿ.ನಾಗೇಂದ್ರ ಅವರ ಪಾತ್ರದ ಬಗ್ಗೆ ಇಡಿ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.
ಆದರೆ, ಸಿದ್ದರಾಮಯ್ಯ ಮತ್ತು ಡಿ. ಕೆ.ಶಿವಕುಮಾರ್ ಇನ್ವೆಸ್ಟಿಗೇಶನ್ ಟೀಂ (ಎಸ್‌ಐಟಿ) ನಾಗೇಂದ್ರ ಹೆಸರು ಉಲ್ಲೇಖಿಸದೆ ಕ್ಲೀನ್ ಚೀಟ್ ನೀಡಿದೆ. ಇಬ್ಬರು ಅಧಿಕಾರಿಗಳ ಹೆಸರನ್ನಷ್ಟೇ ಉಲ್ಲೇಖಿಸಿದೆ ಎಂದು ಕಿಡಿಕಾರಿದರು.
ಈ ಸರ್ಕಾರವು ಎಸ್‌ಐಟಿ ಮೂಲಕ ಮುಚ್ಚಿ ಹಾಕಲು ಎಸ್‌ಐಟಿ ಮಾಜಿ ಸಚಿವ ಬಿ.ನಾಗೇಂದ್ರನನ್ನು ಉಳಿಸುವ ಧೋರಣೆ ಹೊಂದಿದೆ. ಸರ್ಕಾರದ ಹಸ್ತಕ್ಷೇಪ, ಬೆಂಬಲ ಇಲ್ಲದೇ ವಾಲ್ಮೀಕಿ ನಿಗಮದ ಹಗರಣ ನಡೆಯಲು ಸಾಧ್ಯವೇ ಇಲ್ಲ. ಆದರೆ, ಎಸ್‌ಐಟಿ ಈ ಹಗರಣ ಮುಚ್ಚಿಹಾಕುವ ಕೆಲಸ ಮಾಡುತ್ತಿದೆ. ಎಸ್‌ಐಟಿ ತನಿಖೆ, ದೋಷಾರೋಪ ಪಟ್ಟಿ ಬಗ್ಗೆ ಜನರಿಗೆ ದೊಡ್ಡ ಅನುಮಾನವಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.