ಡಬ್ಬಲ್ ಡೆಕ್ಕರ್ ಬಸ್ ಯೋಜನೆ ಕೈಬಿಟ್ಟ ಬಿಎಂಟಿಸಿ
ಬೆಂಗಳೂರು.ಸೆ.೧೧– ನಗರದ ರಸ್ತೆಯಲ್ಲಿ ಡಬ್ಬಲ್ ಡೆಕ್ಕರ್ ಬಸ್‌ಗಳಲ್ಲಿ ಮತ್ತೆ ಪ್ರಯಾಣ ಮಾಡಬೇಕೆನ್ನುವ ನಗರವಾಸಿಗಳ ಕನಸು ಕನಸಾಗಿಯೇ ಉಲಿಯಲಿದೆ.
ಈ ಹಿಂದೆ ರಸ್ತೆಗಳಲ್ಲಿ ಗತ ವೈಭವ ಮೆರೆದಿದ್ದ ಡಬ್ಬಲ್ ಡೆಕ್ಕರ್ ಬಸ್ಸುಗಳನ್ನ ಮತ್ತೆ ನಗರದಲ್ಲಿ ಕಾಣುವ ಕನಸು ಕಂಡಿದ್ದ ಬೆಂಗಳೂರಿಗರಿಗೆ ನಿರಾಸೆ ಉಂಟಾಗಿದೆ. ಇನ್ಮುಂದೆ ಮತ್ತೆ ನಗರದ ರಸ್ತೆಗಳಲ್ಲಿ ಕನಸಿನ ಡಬಲ್ ಡೆಕ್ಕರ್ ಬಸ್‌ಗಳು ರಸ್ತೆಗಿಳಿಯಲ್ಲ ಅನ್ನೋ ವಿಚಾರ ಬಯಲಾಗಿದ್ದು, ಈ ಮೂಲಕ ಈ ಸಾಲಿನ ಜನರ ಕನಸು ಕನಸಾಗಿಯೇ ಉಳಿಯಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅದೊಂದು ಕಾಲವಿತ್ತು. ೮೦, ೯೦ರ ದಶಕಗಳಲ್ಲಿ ಡಬ್ಬಲ್ ಡೆಕ್ಕರ್ ಬಸ್ಸುಗಳು ರಸ್ತೆಗಿಳಿದರೆ ಅದೇನೋ ವೈಭವ. ಬಸ್ಸುಗಳಲ್ಲಿ ಬೆಂಗಳೂರು ಸುತ್ತೋದು ಅದ್ಭುತ ಅನುಭವ. ಅದರಲ್ಲೂ ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನ ಆ ಬಸ್ ಮೇಲೆ ಕುಳಿತು ನೋಡುವುದಕ್ಕೆ ಅಂತಾನೇ ಬೇರೆ ಬೇರೆ ಭಾಗಗಳಿಂದ ನಗರಕ್ಕೆ ಜನ ಬರುತ್ತಿದ್ದರು. ಕಾಲ ಕ್ರಮೇಣ ಆ ಬಸ್ಸುಗಳು ಕಣ್ಮರೆಯಾಗಿ ವೈಭವವು ಮರೆಯಾಗಿಯೇ ಬಿಟ್ಟಿತ್ತು. ಆದರೆ ನಗರದಲ್ಲಿ ಮತ್ತೆ ಆ ಕ್ಷಣಗಳನ್ನ ವಾಪಸ್ ತರುವ ನಿಟ್ಟಿನಲ್ಲಿ ಸರ್ಕಾರ ಮತ್ತು ನಿಗಮ ಪ್ರಯತ್ನ ಪಟ್ಟಿತು. ಆದರೆ ಕೊನೆಗೂ ಕನಸು, ಕನಸಾಗೇ ಉಳಿಯುದುಕೊಳ್ಳುವಂತಾಗಿದೆ.
ಡಬ್ಬಲ್ ಡೆಕ್ಕರ್ ಬಸ್‌ಗಳನ್ನ ರಸ್ತೆಗಳಿಸುವ ಸಂಬಂಧ ಇಲ್ಲಿ ತನಕ ಮೂರು ಬಾರಿ ಟೆಂಡರ್ ಆಹ್ವಾನ ಮಾಡಲಾಗಿತ್ತು. ಆದರೆ ಈವರೆಗೂ ಯಾವ ಕಂಪನಿಯೂ ಟೆಂಡರ್‌ನಲ್ಲಿ ಭಾಗಿಯಾಗಿಲ್ಲ. ನಿಗಮದ ನಿರೀಕ್ಷೆಯಂತೆ ಟೆಂಡರ್‌ನಲ್ಲಿ ಬಿಡ್ ಮಾಡಲು ಸಂಸ್ಥೆಗಳು ಸಿದ್ಧವಿಲ್ಲ. ಭಾಗವಹಿಸಿದ್ದ ಕೆಲವೇ ಕೆಲವು ಬಿಡ್‌ದಾರರು ಪ್ರತಿ ಕಿ.ಮೀ.ಗೆ ೯೬ರೂ. ದರವನ್ನು ಪ್ರಸ್ತಾಪಿಸಿದ್ದಾರೆ. ೯೬ ರೂ.ಗೆ ನೀಡಿ ಡಬಲ್ ಡೆಕ್ಕರ್ ಬಸ್‌ಗಳನ್ನು ಓಡಿಸಿದರೆ, ಭಾರಿ ನಷ್ಟವಾಗುವ ಸಾಧ್ಯೆಯಿರುವುದರಿಂದ ಯೋಜನೆ ಕೈಬಿಡಲು ನಿಗಮ ತೀರ್ಮಾನಿಸಿದೆ.