ಈಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ
ಕೆ.ಆರ್.ಪೇಟೆ.ಸೆ.೧೧: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಳ್ಳೇಕೆರೆ ಬಳಿಯಿರುವ ಈಶ್ವರ ದೇವಾಲಯ ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿದ್ದು ಕಾಯಕಲ್ಪಕ್ಕಾಗಿ ಎದುರು ನೋಡುತ್ತಿದೆ.
ನಮ್ಮ ಪರಂಪರೆಯ ಸಾಕ್ಷಿಪ್ರಜ್ಞೆಯಂತೆ ನಿಂತಿರುವ ಈ ದೇವಾಲಯ ಗ್ರಾಮದಲ್ಲಿನ ವಿಶಾಲವಾದ ಕೆರೆಯ ಏರಿಯ ಹಿಂಬದಿಯಲ್ಲಿದೆ ದೇವಾಲಯದ ಕೆತ್ತನೆ ವಾಸ್ತು ಗಮನಿಸಿದಾಗ ಹೊಯ್ಸಳ ಅರಸರ ಕಾಲದಲ್ಲಿ ನಿರ್ಮಾಣವಾಗಿರುವ ಸಂಭವವಿದೆ. ದೇವಸ್ಥಾನದ ಅಧಿಸ್ಥಾನವು ಮುಚ್ಚಿ ಹೋಗಿರುವುದರಿಂದ ದೇವಾಲಯವು ಪೂರ್ಣಮಟ್ಟದಲ್ಲಿ ಗೋಚರವಾಗುವುದಿಲ್ಲ.
ದೇಗುಲದ ಗೋಡೆಗಳಲ್ಲಿ ಯಾವುದೇ ಆಲಂಕಾರಿಕ ಕೆತ್ತನೆ ಕಾಣುವುದಿಲ್ಲವಾದರೂ ದೇವಾಲಯದ ನವರಂಗ ಗರ್ಭಗುಡಿ ಅಂತರಾಳಗಳ ಮೇಲಿನ ಭಾಗದಲ್ಲಿ ಕೆತ್ತಿರುವ ಪದ್ಮಮಂಡಲ ಮನೋಹರವಾಗಿದೆ. ದೇವಾಲಯವು ಸಂಪೂರ್ಣವಾಗಿ ಕಪ್ಪುಕಲ್ಲಿನಿಂದ ನಿರ್ಮಾಣವಾಗಿದ್ದು ದೇವಾಲಯದ ಬಾಗಿಲು ಪೂರ್ವಾಭಿಮುಖವಾಗಿದೆ. ದೇವಾಲಯದ ಮೇಲ್ಬಾಗದ ಗೋಪುರ ಕುಸಿದಿದೆ ಮೇಲ್ಚಾವಣಿಯಲ್ಲೆಲ್ಲಾ ಹಸಿರು ಬೆಳೆದಿದ್ದು ಚಪ್ಪಡಿಗಳ ನಡುವೆ ಬಿರುಕು ಕಾಣಿಸಿದ್ದು ಮಳೆಗಾಲದಲ್ಲಿ ನೀರು ಸೋರಿಕೆಯಾಗಿ ಶಿವಲಿಂಗ ಜಲಾವೃತಗೊಳ್ಳುತ್ತಿದೆ.ಒಂದು ಕಾಲದಲ್ಲಿ ಸುತ್ತಮುತ್ತ ಗ್ರಾಮಗಳಿಗೆ ಪ್ರಸಿದ್ದ ದೇವಾಲಯವಾಗಿದ್ದ ಈ ಮಲ್ಲೇಶ್ವರ(ಈಶ್ವರ) ದೇವಾಲಯ ಈಗ ಗತಕಾಲದ ನೆನಪು ಮಾಡಿಕೊಳ್ಳುತ್ತಾ ನಿಂತಿದೆ.
ದೇವಾಲಯ ಶಿಥಿಲಗೊಂಡಿದ್ದರೂ ದೇವಾಲಯದ ಅಂತರಾಳ ನವರಂಗ ಮತ್ತು ಗರ್ಭಗುಡಿ ಸುಸ್ಥಿತಿಯಲ್ಲಿದೆ. ಗರ್ಭಗುಡಿಯು ಚೌಕಾಕಾರವಾಗಿದ್ದು ವಿತಾನದಲ್ಲಿ ಕೆತ್ತಿರುವ ಪದ್ಮಮಂಡಲ ಅಲಂಕಾರ ಸೊಗಸಾಗಿ ಕಾಣುತ್ತದೆ. ಇಲ್ಲಿ ಪ್ರತಿಷ್ಟಾಪನೆಗೊಂಡಿರುವ ಶಿವಲಿಂಗ ಶೋಭಾಯಮಾನವಾಗಿ ಕಂಗೊಳಿಸುತಿದ್ದು ಆಕರ್ಷಕವಾಗಿ ಕೆತ್ತಲ್ಪಟ್ಟಿದೆ.
ಹಿಂದಿನ ಕಾಲದಲ್ಲಿ ಅಳತೆ ಮಾಡುವಾಗ ದೊಡ್ಡ ಪ್ರಮಾಣವನ್ನು ಬಳ್ಳ ಎನ್ನುತಿದ್ದರು .ಹಾಗಾಗಿ ಇಲ್ಲಿನ ಕೆರೆ ದೊಡ್ಡದಾಗಿದ್ದರಿಂದ ಬಳ್ಳೇಕೆರೆ ಎಂಬ ಹೆಸರು ಬಂದು ಗ್ರಾಮಕ್ಕೂ ಅದೇ ಹೆಸರು ಅಂಟಿಕೊಂಡಿದೆ.ಅಲ್ಲದೆ ಗ್ರಾಮಕ್ಕೆ ಪ್ರಾಚೀನ ಇತಿಹಾಸವಿದ್ದು ಜೈನರಕಾಲದ ಪರಂಪರೆಯ ನಿಷದಿ ಶಾಸನವೂ ಇಲ್ಲಿ ಪತ್ತೆಯಾಗಿದ್ದು ಈ ಭಾಗದಲ್ಲಿ ಜೈನ ಧರ್ಮ ಪ್ರಚಲಿತವಾಗಿತ್ತೆಂಬುದಕ್ಕೆ ಮಾಹಿತಿ ನೀಡುತ್ತದೆ ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯಾಧ್ಯಕ್ಷ ಬಳ್ಳೇಕೆರೆ ಮಂಜುನಾಥ್.
ದೇವಾಲಯದ ಅರ್ಚಕ ನಾಗರಾಜು ಮತ್ತು ಕಿರಣ್ ಕುಮಾರ್ ಮಾತನಾಡಿ ಅನಾಧಿಕಾಲದಿಂದಲೂ ನಮ್ಮ ಪೂರ್ವಜರು ಶಿವದೇವಾಲಯ ನಿರ್ಮಾಣಕ್ಕೆ ಮಹತ್ವ ನೀಡಿದ್ದಾರೆ. ದೇವಾಲಯ ನಮ್ಮ ವಂಶಸ್ಥರೇ ಪೂಜೆ ಮಾಡಿಕೊಂಡು ಬರುತಿದ್ದು ನಾಲ್ಕು ಕುಟುಂಬದವರು ಸರದಿ ಪ್ರಕಾರ ನಿಯಮಿತವಾಗಿ ಪೂಜಿಸಿಕೊಂಡು ಬಂದಿದ್ದೇವೆ.ಒಂದು ಕಾಲದಲ್ಲಿ ಬಳ್ಳೇಕೆರೆ ಈಶ್ವರ ದೇವಸ್ಥಾನವೆಂದರೆ ನಂಜನಗೂಡಿನ ನಂಜುಂಡೇಶ್ವರನ ದೇವಸ್ಥಾನವೆಂದು ಕರೆಯುತಿದ್ದರಲ್ಲದೆ ದೊಡ್ಡಜಾತ್ರೆಯೇ ಶಿವರಾತ್ರಿಯಂದು ನಡೆಯುತಿತ್ತು. ದೇವಸ್ಥಾನ ಶಿಥಿಲಗೊಂಡ ನಂತರ ಬರುವ ಭಕ್ತರು ಕಡಿಮೆಯಾಗಿದ್ದಾರೆ. ಗ್ರಾಮದವರು ಮತ್ತು ಸರ್ಕಾರದವರು ಗಮನಹರಿಸಿ ಜೀರ್ಣೋದ್ಧಾರ ಮಾಡಿದರೆ ನಮ್ಮ ಪ್ರಾಚೀನ ದೇಗುಲದ ಸಂರಕ್ಷಣೆ ಮಾಡಿದಂತಾಗುತ್ತದೆ ಎನ್ನುತ್ತಾರೆ.