ಜೈಲಿನಲ್ಲಿ ಕೊಲೆ ಆರೋಪಿ ಉಪವಾಸ
ಬೆಂಗಳೂರು,ಸೆ.೧೧-ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಉಡುಪಿಯ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಅನ್ನ,ನೀರು ಸ್ವೀಕರಿಸಲು ನಿರಾಕರಸಿದೇ ಉಪವಾಸ ಕುಳಿತಿದ್ದಾನೆ.
ಜೈಲಿನಲ್ಲಿ ನಿನ್ನೆಯಿಂದ ಬೆಳಗ್ಗಿನ ತಿಂಡಿ ಮಧ್ಯಾಹ್ನ ಊಟ ಮಾಡದೆ ಹಠ ಮಾಡುತ್ತಾ ಉಪವಾಸ ಕುಳಿತಿರುವ ಅರುಣ್ ಚೌಗುಲೆ ಯನ್ನು ನಿಭಾಯಿಸಲು ಜೈಲು ಸಿಬ್ಬಂದಿ ಸುಸ್ತಾಗಿದ್ದಾರೆ.
ಕಳೆದ ೨೦೨೩ರಲ್ಲಿ ಉಡುಪಿಯ ನೇಜಾರ್ ಬಳಿಯ ತ್ರಿಪಾಠಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ನಡೆದಿತ್ತು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಉದ್ಯೋಗಿ ಪ್ರವೀಣ್ ಅರುಣ್ ಚೌಗುಲೆ ಉಡುಪಿಯಲ್ಲಿನ ಮನೆಗೆ ನುಗ್ಗಿ ಹಸೀನಾ(೪೮) ಮತ್ತು ಆಕೆಯ ಮಕ್ಕಳಾದ ಅಫ್ಸಾನ್(೨೩), ಅಸೀಮ್ (೧೨) ಮತ್ತು ಅಯ್ನಾಜ್ (೨೧) ಕೊಲೆ ಮಾಡಿದ್ದ. ಸದ್ಯ ಈಗ ಆರೋಪಿ ಪ್ರವೀಣ್ ಸೆಂಟ್ರಲ್ ಜೈಲ್‌ನ ಪ್ರತ್ಯೇಕ ಸೆಲ್ ನಲ್ಲಿ ಜೈಲುವಾಸ ಅನುಭವಿಸುತ್ತಿದ್ದಾನೆ.
ಬೆಳಗ್ಗಿನ ತಿಂಡಿ, ಮಧ್ಯಾಹ್ನ ಊಟ ಮಾಡದೆ ಉಪವಾಸ ಮಾಡುತ್ತಿದ್ದು ಪ್ರಕರಣದ ವಿಚಾರಣೆಯನ್ನು ನಗರದ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾನೆ.
ಜೀವ ಬೆದೆರಿಕೆ ಹಿನ್ನೆಲೆ ಪ್ರತ್ಯೇಕ ಸೆಲ್‌ನಲ್ಲಿ ಇಟ್ಟಿರುವ ಬಗ್ಗೆ ಕೋರ್ಟ್‌ಗೆ ಮನವಿ ಮಾಡಿದ್ದಾನೆ.
ಸೆಂಟ್ರಲ್ ಜೈಲ್‌ನ ಪ್ರಧಾನ ಬ್ಲಾಕ್‌ಗೆ ತನ್ನನ್ನು ವರ್ಗಾವಣೆ ಮಾಡುವಂತೆ ಆರೋಪಿ ಪ್ರವೀಣ್ ಮನವಿ ಮಾಡಿದ್ದಾನೆ. ಆದರೆ ಪ್ರವೀಣ್ ಚೌಗುಲೆಗೆ ಜೀವ ಬೆದರಿಕೆ ಇರುವುದರಿಂದ ಪ್ರತ್ಯೇಕ ಸೆಲ್‌ನ ಅಗತ್ಯ ಇದೆ ಎಂದು ಜೈಲ್‌ನ ಸಹಾಯಕ ಅಧೀಕ್ಷಕರು ಕೋರ್ಟ್‌ಗೆ ಸ್ಪಷ್ಟನೆ ನೀಡಿದ್ದಾರೆ.
೨೦೨೩ರ ನವೆಂಬರ್ ೧೨ ರಂದು ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಆರೋಪಿ ಅರುಣ್ ಚೌಗುಲೆ ಕೊಲೆ ಮಾಡಿ ಕುಟುಂಬದ ವೃದ್ಧೆ ಹಾಜಿರಾ ಹತ್ಯೆಗೆ ಯತ್ನಿಸಿದ್ದ. ಜೀವ ಬೆದರಿಕೆ ಹಿನ್ನೆಲೆ ನವೆಂಬರ್ ೨೭ರಂದು ಉಡುಪಿಯಿಂದ ಬೆಂಗಳೂರಿಗೆ ಆರೋಪಿಯನ್ನು ಪೊಲೀಸರು ಶಿಫ್ಟ್ ಮಾಡಿದ್ದರು.
ಏನಿದು ಪ್ರಕರಣ:
೨೦೨೩ರ ನವೆಂಬರ್ ೧೨ರಂದು ಏಕಾಏಕಿ ಮನೆಗೆ ನುಗ್ಗಿ ಒಂದೇ ಕುಟುಂಬದ ನಾಲ್ವರನ್ನು ಕೇವಲ ೧೫ ನಿಮಿಷಗಳಲ್ಲಿ ಹತ್ಯೆ ಮಾಡಿ ಅರುಣ್ ಚೌಗುಲೆ ಪರಾರಿಯಾಗಿದ್ದ, ನೇಜಾರು ನಿವಾಸಿ ಹಸೀನಾ (೪೮) ಅವರ ಮಕ್ಕಳಾದ ಅಫ್ನಾನ್ (೨೩), ಏರ್ ಇಂಡಿಯಾದಲ್ಲಿ ಉದ್ಯೋಗಿಯಾಗಿರುವ ಅಯ್ನಾಝ್ (೨೧) ಹಾಗೂ ೮ನೇ ತರಗತಿಯ ಅಸೀಮ್(೧೨) ಕೊಲೆಯಾಗಿದ್ದರು.
ಹತ್ಯೆಗೀಡಾದ ಯುವತಿ ಅಫ್ನಾನ್ ಹಾಗೂ ಕೊಲೆ ಮಾಡಿದ ಆರೋಪಿ ಇಬ್ಬರೂ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಕೊಲೆಯಾದ ಯುವತಿಗೂ ಆರೋಪಿಗೂ ಪರಿಚಯವಿತ್ತು.