ತಾಳ್ಮೆಯ ಕೊರತೆಯಿಂದ ಆತ್ಮಹತ್ಯೆ ಪ್ರಕರಣಗಳಲ್ಲಿ ಹೆಚ್ಚಳ: ಡಾ. ರಾಮದುರ್ಗ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೧: ತಾಳ್ಮೆಯ ಕೊರತೆಯಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಮನೊರೋಗ ತಜ್ಞ ಡಾ. ಸಂತೋಷ ರಾಮದುರ್ಗ ಹೇಳಿದ್ದಾರೆ.
ಮಂಗಳವಾರ ವಿಶ್ವ ಆತ್ಮಹತ್ಯೆ ತಡೆ ದಿನ ಮತ್ತು ಅದರ ಉಪಚಾರ ದಿನದ ಅಂಗವಾಗಿ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ಯುವಕ ಮತ್ತು ಯುವತಿಯರಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ತಾಳ್ಮೆಯ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಯಾವ ವ್ಯಕ್ತಿ ಆತ್ಮಹತ್ಯೆಗಳ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿರುತ್ತಾನೋ ಅಂಥವರ ಬಗ್ಗೆ ನಾವು ತೀವ್ರ ನಿಗಾ ವಹಿಸಬೇಕು. ಅಲ್ಲದೇ, ಅವರಿಗೆ ಆಯಾ ಸಂದರ್ಭಕ್ಕೆ ಅನುಗುಣವಾಗಿ ಸಮಾಲೋಚನೆ ನಡೆಸಿ ಸಲಹೆ ಸೂಚನೆ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು,
ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾರತವು ಇದಕ್ಕೆ ಹೊರತಾಗಿಲ್ಲ. ಯಾವುದೇ ವ್ಯಕ್ತಿಯನ್ನು ಆತ್ಮಹತ್ಯೆಯ ಗುಣಲಕ್ಷಣಗಳು ಕಂಡು ಬಂದರೆ ತಕ್ಷಣವೇ ಅವರು ಮಾನಸಿಕ ರೋಗ ತಜ್ಞರನ್ನು ಸಂಪರ್ಕಿಸುವುದು ಬಹಳ ಮುಖ್ಯವಾಗಿದೆ. ಮಾನಸಿಕ ಆರೋಗ್ಯ ಕೂಡ ಇತರ ಆರೋಗ್ಯ ಸಮಸ್ಯೆಗಳಂತೆ ಇರುತ್ತದೆ. ಹೀಗಾಗಿ ಯಾವುದೇ ರೀತಿಯ ಸಾಮಾಜಿಕ ವಿಷಯಗಳಿಗೆ ತಲೆಕೆಡಿಸಿಕೊಳ್ಳದೆ ನೇರವಾಗಿ ಮಾನಸಿಕ ರೋಗ ತಜ್ಞರನ್ನು ಸಂಪರ್ಕಿಸುವ ಮೂಲಕ ತಮ್ಮಲ್ಲಿರುವ ಆತ್ಮಹತ್ಯೆ ಸಂಬAಧಿತ ವಿಷಯಗಳ ಕುರಿತು ಗುಪ್ತ ಸಮಾಲೋಚನೆ ಮಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಡಾ. ಗೌತಮಿ ಮಾತನಾಡಿ, ವಿಶ್ವಾದ್ಯಂತ ಪ್ರತಿವರ್ಷ ಸುಮಾರು ಏಳು ಲಕ್ಷ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇವರಲ್ಲಿ ೧.೬೦ ಲಕ್ಷ ಜನ ಭಾರತದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಾವೆಲ್ಲರೂ ಆತ್ಮಹತ್ಯೆಯ ಕುರಿತು ಮುಕ್ತವಾಗಿ ಚರ್ಚಿಸುವುದರಿಂದ ಇಂಥ ಪ್ರಕರಣಗಳನ್ನು ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೊನ್ ಚೊಪಡೆ, ಮನೋರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ನಜೀರ್ ಬಳಗಾರ, ಡಾ. ನಿಶಾಂತ್, ಸೌರಬ ಬಿರಾದಾರ, ನವೀನ ಚಿಟ್ಟಿ, ಮಹೇಂದ್ರಕುಮಾರ, ರಿಯಾಜ್, ಪೈಜಲ್, ಶಿಲ್ಪಾ ಬಳಗಾರ, ಅಪ್ಪನಗೌಡ ಪಾಟೀಲ, ಡಾ. ಅಮಿತಕುಮಾರ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.