ಕಲಾವಿದರು ಬಹುತ್ವ ಉಳಿಸುವ ಕೆಲಸ ಮಾಡಬೇಕು
ಸಂಜೆವಾಣಿ ನ್ಯೂಸ್
ಮೈಸೂರು:ಸೆ.11:- ರಾಜಕಾರಣಿಗಳ ನಾಟಕಗಳು ನೀಡುತ್ತಿರುವ ಸಂದೇಶಗಳು ಕೋಮು ಸೌಹಾರ್ದತೆ, ಎಲ್ಲರನ್ನು ಒಳಗೊಳ್ಳುವ ಗುಣ, ಸಹೋದರತ್ವವನ್ನು ಕದಡುತ್ತಿವೆ. ಭ್ರಷ್ಟಾಚಾರ, ಸರ್ವಾಧಿಕಾರತ್ವ ದೇಶದಾದ್ಯಂತ ಚಾಚಿದೆ. ಹೀಗಾಗಿ ಕಲಾವಿದರು ಎಚ್ಚರಿಕೆ ಹಾಗೂ ಬದ್ಧತೆಯಿಂದ ಬಹುತ್ವ ಉಳಿಸುವ ಕೆಲಸ ಮಾಡಬೇಕು ಎಂದು ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ತಿಳಿಸಿದರು.
ಹಾರ್ಡ್ವಿಕ್ ಶಾಲೆ ಆವರಣದಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಮಂಗಳವಾರ ರಂಗ ಶಿಕ್ಷಣ ಕುರಿತು ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ರಂಗಭೂಮಿ, ದೂರದರ್ಶನ, ಸಿನಿಮಾ ಕಲಾವಿದರಿಗಿಂತಲೂ ರಾಜಕಾರಣಿಗಳ ನಾಟಕವೇ ಇಂದು ಆಕರ್ಷಕವಾಗಿ ಕಾಣುತ್ತಿದ್ದು, ಅವರಿಂದ ದೇಶದ ಬಹುತ್ವ ನಾಶವಾಗುತ್ತಿದೆ. ಕಲಾವಿದರೇ ನಾಚುವಂತೆ ರಾಜಕಾರಣಿಗಳು ನಾಟಕ ಮಾಡುತ್ತಿದ್ದಾರೆ. ಇವರು ಬಣ್ಣ ಹಚ್ಚಿ ನಾಟಕ ಮಾಡಿದರೆ, ರಾಜಕಾರಣಿಗಳು ಬಣ್ಣ ಹಚ್ಚದೆಯೇ ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದರು.
ಏಕಮುಖಿ ಸಂಸ್ಕೃತಿ ಪ್ರತಿಪಾದಿಸುತ್ತಿರುವವರೇ ದೇಶಭಕ್ತರಾಗಿದ್ದಾರೆ. ಅವರನ್ನು ಪ್ರಶ್ನಿಸುವವರು ದೇಶದ್ರೋಹಿಗಳಾಗುತ್ತಿದ್ದಾರೆ. ವಿಭಜನಕಾರಿ ಸಿದ್ಧಾಂತಗಳನ್ನು ಮಕ್ಕಳಿಗೆ ತುಂಬಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳಿಗೆ ವರ್ತಮಾನ ಹಾಗೂ ಬಹುತ್ವದ ಪರಂಪರೆಯ ಅರಿವು ಮೂಡಿಸಲು ರಂಗಭೂಮಿ ಕಾರ್ಯಾಗಾರಗಳನ್ನು ನಡೆಸಬೇಕಿದೆ?ಎಂದರು.
ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, 20 ವರ್ಷದ ಹಿಂದೆ ಮಕ್ಕಳಿಗೆ ರಂಗಭೂಮಿ ಬೇಕೆ ಎಂಬ ಪ್ರಶ್ನೆ ಮೂಡಿತ್ತು. ಆಗ, ಬಾಲ್ಯ ಸಮೃದ್ಧಿಯಿಂದ ಕೂಡಿತ್ತು. ಕಲಿಕೆಯು ಚೆನ್ನಾಗಿತ್ತು. ಇದೀಗ ಮೊಬೈಲ್‍ನ ವರ್ಚ್ಯುವಲ್ ಜಗತ್ತಿನೊಳಗೆ ಸಿಲುಕಿದ್ದಾರೆ. ಅವರಿಗೆ ವಾಸ್ತವ ಜಗತ್ತನ್ನು ಅರ್ಥ ಮಾಡಿಸುವುದೂ ಸವಾಲಾಗಿದೆ. ಅವರಿಗೆ ರಂಗಭೂಮಿ ಅನಿವಾರ್ಯವಾಗಿದೆ ಎಂದರು.
ರಂಗಭೂಮಿಯು ಬಹುಶಿಸ್ತೀಯ ಕಲಿಕೆಯನ್ನು ನೀಡಲಿದ್ದು, ವರ್ಚ್ಯುವಲ್ ಜಗತ್ತು ಸೃಷ್ಟಿಸಿರುವ ಸವಾಲುಗಳನ್ನ ಎದುರಿಸುವ ಶಕ್ತಿಯನ್ನು ಕೊಡಲಿದೆ ಎಂದು ತಿಳಿಸಿದರು.
ಮಕ್ಕಳನ್ನು ಮರೆತ ಆಡಳಿತ ವ್ಯವಸ್ಥೆ:
ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಪ್ರಸನ್ನ ಮಾತನಾಡಿ, ದೇಶದ ಆಡಳಿತ ವ್ಯವಸ್ಥೆ ಮಕ್ಕಳನ್ನು ಮರೆತಿದೆ. ದೇಶದ ಶೇ.50ರಷ್ಟು ಮಕ್ಕಳು ಖಿನ್ನತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಮೊಬೈಲ್ ಗೇಮಿಂಗ್, ವರ್ಚ್ಯುವಲ್ ಜಗತ್ತು ಬಾಲ್ಯವನ್ನು ಕಿತ್ತುಕೊಳ್ಳುತ್ತಿದೆ. ಅವರಿಗೆ ಮಕ್ಕಳ ರಂಗಭೂಮಿ ಚಿಕಿತ್ಸೆಯನ್ನು ನೀಡಬಲ್ಲದು ಎಂದರು.
ಅಮಿತಾಬ್ ಬಚ್ಚನ್, ಇರ್ಫಾನ್ ಖಾನ್ ಸೇರಿದಂತೆ ಮೇರು ನಟರು ರಂಗಭೂಮಿ ಹಿನ್ನೆಲೆಯವರು. ಅವರಲ್ಲಿ ಸಹಜ ಅಭಿನಯ ಕಾಣುತ್ತಿದ್ದೆವು. ಈಗಿನ ಕಲಾವಿದರಿಗೆ ರಂಗಭೂಮಿಯಲ್ಲದೇ ಸಿನಿಮಾ, ಒಟಿಟಿ ವೇದಿಕೆಗಳಿವೆ. ಅವರಲ್ಲಿ ಸೃಜನಶೀಲತೆ, ಅನುಭವ ಕೊರತೆ ಕಾಣುತ್ತಿದೆ. ಈಗಿನ ನಟರೂ ದ್ವೀಪಗಳಂತಾಗಿದ್ದಾರೆ ಎಂದರು.
ಕಾರ್ಯಾಗಾರದ ನಿರ್ದೇಶಕ ರಜನೀಶ್ ಬಿಷ್ಠ್ ಹಾಜರಿದ್ದರು.