ಚಿಣ್ಣರ ವನದರ್ಶನ ಉಚಿತ ಪ್ರವಾಸಕ್ಕೆ ಚಾಲನೆ
ಕೋಲಾರ,ಸೆ,೧೧- ಅರಣ್ಯ ಇಲಾಖೆ ಆಶ್ರಯದಲ್ಲಿ ರಾಜ್ಯ ಸರ್ಕಾರದ ವಿನೂತನ ಯೋಜನೆಯಾದ ‘ಚಿಣ್ಣರ ವನದರ್ಶನ’ ಮಕ್ಕಳಲ್ಲಿ ಪರಿಸರ,ಗಿಡಮರಗಳು,ಪ್ರಾಣಿಸಂಕುಲದ ಕುರಿತು ಅರಿವು ನೀಡುವ ಕಾರ್ಯಕ್ರಮವಾಗಿದ್ದು, ಎರಡು ದಿನಗಳ ಪ್ರವಾಸವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆನಂದ್ ಕರೆ ನೀಡಿದರು.
ವಲಯ ಅರಣ್ಯ ಸಂರಕ್ಷಣಾಧಿಕಾರಿ ಪುಷ್ಪಲತಾ ಮಾರ್ಗದರ್ಶನದಲ್ಲಿ ಇದೇ ಮೊದಲ ಬಾರಿಗೆ ‘ಚಿಣ್ಣರ ವನದರ್ಶನ’ಕ್ಕೆ ಆಯ್ಕೆಯಾಗಿ ಅರಣ್ಯಾಶ್ರಿತ ಪ್ರವಾಸಿ ತಾಣಗಳಿಗೆ ಎರಡು ದಿನಗಳ ಉಚಿತ ಪ್ರವಾಸ ಹೊರಟ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಶುಭ ಕೋರಿ ಅವರು ಮಾತನಾಡುತ್ತಿದ್ದರು.
ಮುಂದಿನ ಪೀಳಿಗೆಗೆ ಜೀವ ಸಂಕುಲದ ಉಳಿವಿಗೆ ಪರಿಸರ ಸಂರಕ್ಷಣೆ ಅತಿ ಮುಖ್ಯವಾಗಿದೆ, ಗಿಡಮರಗಳು ಉಳಿದರೆ ಮಾತ್ರವೇ ಮನುಷ್ಯ ಉತ್ತಮ ಜೀವನ ನಿರ್ವಹಿಸಲು ಸಾಧ್ಯ ಎಂಬ ಸತ್ಯದ ಅರಿವಿದ್ದರೂ ನಾವಿಂದು ಪರಿಸರ ನಾಶಕ್ಕೆ ಕೈಹಾಕುತ್ತಿದ್ದೇವೆ ಎಂದು ವಿಷಾದಿಸಿದರು.
ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಲು ಸರ್ಕಾರ ಈ ವಿನೂತನ ಯೋಜನೆಯನ್ನು ಇದೇ ಮೊದಲಬಾರಿಗೆ ಆರಂಭಿಸಿದ್ದು, ಪ್ರಾಯೋಗಿಕವಾಗಿ ತಾಲ್ಲೂಕಿಗೆ ಒಂದು ಶಾಲೆಯ ಮಕ್ಕಳನ್ನು ಉಚಿತ ಪ್ರವಾಸ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು.
ಪರಿಸರ ಸಮತೋಲನ ಕಾಪಾಡಿಕೊಳ್ಳಲು ಅಗತ್ಯವಾದ ಪ್ರಮಾಣದಲ್ಲಿ ಇಂದು ಕಾಡುಗಳು ಇಲ್ಲವಾಗಿದೆ ಎಂದ ಅವರು, ಈಗಾಗಲೇ ಗಿಡಮರಗಳ ನಾಶದಿಂದಾಗಿ ತಾಪಮಾನ ಏರಿಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಇದರಿಂದ ಪ್ರಾಕೃತಿಕ ವಿಪತ್ತುಗಳು ಹೆಚ್ಚುತ್ತಿದ್ದು, ಆತಂಕಕಾರಿಯಾಗಿದೆ ಎಂದರು.
ಅಭಿವೃದ್ದಿ ಹೆಸರಿನಲ್ಲಿ ಅರಣ್ಯ ನಾಶವಾಗುತ್ತಿದೆ, ಕಾಂಕ್ರಿಟ್ ಕಾಡುಗಳು ಬೆಳೆಯುತ್ತಿವೆ, ಇದರಿಂದ ಪರಿಸರದ ಮೇಲೆ ಮಾರಕ ಪರಿಣಾಮ ಬೀರುವಂತಾಗಿದೆ ಎಂದ ಅವರು, ಅರಣ್ಯ ನಾಶ ಮುಂದುವರೆಸಿದರೆ ಮುಂದಿನ ಪೀಳಿಗೆ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸಿದರು.
ಮಕ್ಕಳ ನೇತೃತ್ವ ವಹಿಸಿದ್ದ ಶಿಕ್ಷಕ ಆರ್.ವೆಂಕಟರೆಡ್ಡಿ, ತಾಲ್ಲೂಕಿಗೊಂದು ಶಾಲೆ ಆಯ್ಕೆ ಸಂದರ್ಭದಲ್ಲಿ ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಶಾಲೆ ವತಿಯಿಂದ ಅರಣ್ಯ ಇಲಾಖೆಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿ, ಮಕ್ಕಳು ಶಿಸ್ತು ಕಾಪಾಡಿ, ಶಾಲೆಗೆ ಘನತೆಗೆ ಕುತ್ತಾಗುವ ರೀತಿ ವರ್ತಿಸದಿರಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ರಮಾದೇವಿ, ಅರಣ್ಯ ಇಲಾಖೆಯ ಅರಣ್ಯ ಗಸ್ತುಪಾಲಕ ನಾಗರಾಜ್, ವೀಕ್ಷಕ ಶೇಖರ್, ಸುಬ್ರಮಣಿ ಮತ್ತಿತರರಿದ್ದರು.