ಹೋಟೆಲ್ ಉದ್ಯಮ ಜೀವನದ ಅವಿಭಾಜ್ಯ ಅಂಗ
ಸಂಜೆವಾಣಿ ನ್ಯೂಸ್
ಮೈಸೂರು:ಸೆ.11:– ಹೋಟೆಲ್ ಉದ್ಯಮ ಜನರ ಜೀವನದ ಅವಿಭಾಜ್ಯ ಅಂಗ. ಇದರಿಂದಾಗಿ ಹೋಟೆಲ್ ಉದ್ಯಮ ಎಂದಿಗೂ ತನ್ನ ಬೆಲೆ ಕಳೆದುಕೊಳ್ಳುವುದಿಲ್ಲ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್ ಹೇಳಿದರು.
ಮಂಗಳವಾರ ನಗರದ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಇರುವ ಖಾಸಗಿ ಹೋಟೆಲ್ ಆವರಣದಲ್ಲಿ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದಿಂದ ಏರ್ಪಡಿಸಲಾಗಿದ್ದ ಸಹಕಾರ ಮಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೋಟೆಲ್ ಉದ್ಯಮ ಇಂದು ಎಲ್ಲರಲ್ಲೂ ಹಾಸುಹೊಕ್ಕಾಗಿದೆ. ಈ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಯುವಜನರು ಅಗತ್ಯ ಕೌಶಲಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂದು ಹೋಟೆಲ್ ಉದ್ಯಮ ಬೃಹತ್ತಾಗಿ ಬೆಳೆಯುತ್ತಿದೆ. ಹೋಟೆಲ್ ಉದ್ಯಮದಲ್ಲಿ ಬಂಡವಾಳ ಹೂಡಿಕೆ ಮಾಡಲು ಉತ್ತಮ ಅವಕಾಶವಿದ್ದು, ಯುವ ಉದ್ಯಮಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸ್ಥಳೀಯ ಸಂಸ್ಥೆಗಳ ನಿಯಮಗಳು ಮತ್ತು ತೆರಿಗೆ ನೀತಿಗಳು ಕೆಲವೊಮ್ಮೆ ಹೋಟೆಲ್ ಉದ್ಯಮದ ಅಭಿವೃದ್ಧಿಗೆ ತೊಡಕಾಗುತ್ತವೆ. ಹಾಗಾಗಿ, ಸಣ್ಣ ಉದ್ಯಮಗಳನ್ನು ಪೆÇೀಷಿಸುವಂತಹ ಉದಾತ್ತ ನೀತಿ ನಿಯಮಗಳನ್ನು ಸರ್ಕಾರಗಳು ರೂಪಿಸಬೇಕು ಎಂದರು.
ಅರ್ಕಧಾಮದ ಸ್ಥಾಪಕ ಶ್ರೀನಿವಾಸ ಅರ್ಕ ಗುರೂಜಿ ಮಾತನಾಡಿ, ಯಾವುದೇ ವ್ಯಕ್ತಿಗಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಅವರ ಸಾಧನೆ ಗುರುತಿಸಿ ಸನ್ಮಾನಿಸುವುದು ಇಡೀ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ ಎಂದರು.
ಸಂಘದ ಅಧ್ಯಕ್ಷ ನಾರಾಯಣ ವಿ.ಹೆಗಡೆ ಮಾತನಾಡಿ, ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಜನರ ಬದುಕು ಒಂದಲ್ಲಾ ಒಂದು ರೀತಿಯಲ್ಲಿ ಹೋಟೆಲ್ ಉದ್ಯಮದೊಂದಿಗೆ ಸಂಪರ್ಕ ಹೊಂದಿದೆ. ಸರ್ಕಾರ ಹೋಟೆಲ್ ಉದ್ಯಮದ ಬೆಳವಣಿಗೆಗೆ ಪೂರಕವಾಗಿ ಮೂಲ ಸೌಕರ್ಯ ಒದಗಿಸಬೇಕು ಎಂದು ಹೇಳಿದರು. ಇದೇ ವೇಳೆ ಹೋಟೆಲ್ ಉದ್ಯಮಿಗಳಾದ ರಾಮಕೃಷ್ಣ ಹೆಬ್ಬಾರ್, ಆರ್.ಮುರಳೀಧರನ್, ಜಿ.ಜಿ.ರಾಘವನ್ ಅವರಿಗೆ ಸಹಕಾರ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಆನಂದ ಎಂ.ಶೆಟ್ಟಿ, ನಿರ್ದೇಶಕ ಸಿ.ನಾರಾಯಣಗೌಡ, ವಿ.ಎಸ್.ಶಾಸ್ತ್ರಿ, ಸುಬ್ರಮಣ್ಯ ಆರ್.ತಂತ್ರಿ, ಪಿ.ನಾರಾಯಣ ಕುಂದರ್, ಎಂ.ರಘುವೀರ್ ಪುರಾಣಿಕ್, ಕೆ.ಸಿ.ವಿಶ್ವಾನಂದ ಭಟ್, ಎಂ.ಎಸ್.ಜಯಪ್ರಕಾಶ್, ಹೇಮಂತ್ ಕುಮಾರ್, ಸುಮಿತ್ರಾ ಎ.ತಂತ್ರಿ ಹಾಜರಿದ್ದರು.