ಯುವಪೀಳಿಗೆ ಕೆಂಪೇಗೌಡರ ಚರಿತ್ರೆ ಓದಬೇಕು
ಸಂಜೆವಾಣಿ ನ್ಯೂಸ್
ಮೈಸೂರು:ಸೆ.11:- ಇತಿಹಾಸ ಓದದವರು ಇತಿಹಾಸ ಸೃಷ್ಟಿಸಲಾರರು ಎಂಬ ಅಂಬೇಡ್ಕರ್ ಅವರ ಮಾತಿನಂತೆ ಕೆಂಪೇಗೌಡ ಚರಿತ್ರೆ ಓದಬೇಕು. ಇಂದಿನ ಇತಿಹಾಸ ತಿಳಿದರೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕೆಂಪೇಗೌಡರ ಬಗ್ಗೆ ತಿಳಿದುಕೊಳ್ಳದೆ, ಬೇರೆ ಬೇರೆ ವರದಿಗಳ ಆಧಾರದ ಮೇಲೆ ಅವರನ್ನು ತಿಳಿದುಕೊಳ್ಳುವುದು ಊಹೆಗೂ ನಿಲುಕುವುದಿಲ್ಲ. ಒಬ್ಬ ವ್ಯಕ್ತಿಯ ಪೂರ್ವಪರ ತಿಳಿಯದಿದ್ದರೆ ಉಡಾಫೆ ಉತ್ತರ ನಿರೀಕ್ಷಿಸಬೇಕಾಗುತ್ತದೆ. ಕೆಂಪೇಗೌಡರು ಬದುಕಿದಾಗ ದೇಶಕ್ಕೆ ನಾಡಿಗೆ ಏನಾದರೂ ಸೇವೆ ಮಾಡಬೇಕು ಎಂಬ ತುಡಿತವಿತ್ತು. ಅದರಂತೆ ಸಾಕಷ್ಟು ಸೇವೆ ಮಾಡಿದ್ದು, ಅವರು ಕೇವಲ ಸಾಮಂತರಾಜ ಮಾತ್ರವಲ್ಲದೇ ಬದುಕಿನ್ನುದ್ದಕ್ಕೂ ಮುಂದಿನ ಸಮಾಜಕ್ಕೆ ಏನು ನೀಡಬೇಕು ಎಂಬ ದೂರದೃಷ್ಟಿಯುಳ್ಳ ನಾಯಕನಾಗಿದ್ದರು ಎಂದು ತಿಳಿಸಿದರು.
ಸೋಮಾರಿಗಳನ್ನು ಕ್ರೀಯಾ ಶೀಲರನ್ನಾಗಿ ಮಾಡಿ ತಮ್ಮ ಜೀವನವನ್ನು ಕಾಯಕಕ್ಕೆ ಮುಡಿಪಿಡುವಂತೆ ಮಾಡಿದ ಕಾಯಕಯೋಗಿ ನಾಡ ಪ್ರಭು ಕೆಂಪೇಗೌಡರು ಎಂದು ಹೇಳಿದರು.
ಪಂಚ ಋಣವಿದ್ದು, ಮಾತ, ಪಿತೃ, ದೇವ, ಋಷಿ ಮತ್ತು ಸೇವೆಯ ಋಣಗಳಿವೆ. ಋಣದ ಈ ಸೂತಕವನ್ನು ಬಗೆಹರಿಸಿಕೊಳ್ಳುವುದು ಕಷ್ಟಕರ. ಮಾತೃ-ಪಿತೃ ಋಣಗಳನ್ನು ತೀರಲು ಎಷ್ಟು ಜನ್ಮವಿದ್ದರೂ ಸಾಲದೂ. ಹಾಗೆಯೇ ಕೆಂಪೇಗೌಡರು ನಾಡಿಗೆ ಮಾಡಿರುವ ಸೇವೆಯ ಋಣ ತೀರಿಸಲು ಅವರ ಬಗ್ಗೆ ತಿಳಿದುಕೊಳ್ಳಬೇಕು. ನಾಡನ್ನು ಕಟ್ಟಿ ಬಿಟ್ಟಿರುವ ಅವರ ಆದರ್ಶನವನ್ನು ಮುಂದಿನ ಪೀಳಿಗೆಗೆ ತಿಳಿಸಲು ಮುಕ್ತ ವಿವಿ ನಾಡಪ್ರಭು ಕೆಂಪೇಗೌಡರ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರ ಆರಂಭಿಸಿದೆ ಎಂದರು.
ಇತಿಹಾಸ ತಜ್ಞ ಡಾ.ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಕೆಂಪೇಗೌಡ ಅಧ್ಯಯನ ಪೀಠದ ಅವಶ್ಯಕತೆ ಇದ್ದಿಯಾ ಎಂದು ಅನೇಕರು ಮಾತನಾಡುತ್ತಾರೆ. ಆದರೆ, ಇತಿಹಾಸದಲ್ಲಿ ಎರಡು ರಾಜಮನೆತನಗಳನ್ನು ಕಡೆಗಣನೆ ಮಾಡಲಾಗಿದ್ದು, ಗಂಗರು 654 ವರ್ಷ ಹಳೆ ಮೈಸೂರು, ತಮಿಳುನಾಡಿನ ಪಶ್ಚಿಮ ಭಾಗವನ್ನು ಸಮರ್ಥವಾಗಿ ಆಳುವ ಮೂಲಕ ಶ್ರೀರಾಜ್ಯ ಎಂಬ ಬಿರುದು ಪಡೆದುಕೊಂಡಿದ್ದಾರೆ. ಹಾಗೆಯೇ ಚಾಲುಕ್ಯರು ಮತ್ತು ರಾಷ್ಟ್ರಕೂಟರ ಬೆನ್ನೆಲುಬಾಗಿ ನಿಂತಿದ್ದರು. ಕರ್ನಾಟಕ ಮಾತ್ರವಲ್ಲದೇ ದೇಶದಲ್ಲಿಯೇ ಚಾಲುಕ್ಯರು ಮತ್ತು ರಾಷ್ಟ್ರಕೂಟರು ಇಲ್ಲದಿದ್ದರೆ ಇತಿಹಾಸ ಏನಾಗುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕರ್ನಾಟಕ ಎಂದು ಮರು ನಾಮಕರಣ ಮಾಡಿದ ಹಿನ್ನೆಲೆಯಲ್ಲಿ ಸುವರ್ಣ ಕರ್ನಾಟಕ ಸಂಭ್ರಮ ಆಚರಣೆ ಮಾಡುತ್ತಿದ್ದಾರೆ. ಆದರೆ, 7ನೇ ಶತಮಾನದ ಭೂವಿಕ್ರಮ ಎಂಬ ರಾಜ ಕರ್ನಾಟಕ ಎಂದು ಹೆಸರು ನೀಡಿದ್ದಾನೆ. ಅಧ್ಯಯನದ ಕೊರೆತೆಯಿಂದ ಭೂ ವಿಕ್ರಮನಿಗೆ ನೀಡಬೇಕಾದ ಪ್ರಶಂಸೆಯನ್ನು ಮುಖ್ಯಮಂತ್ರಿಗೆ ನೀಡುತ್ತಿದ್ದಾರೆ ಎಂದರು.
ಕೆಂಪೇಗೌಡರ ಬಗ್ಗೆ ಪೂರ್ಣ ಪ್ರಮಾಣದ ವಿವರ ಇಲ್ಲದವರು ಇಲ್ಲಸಲದ್ದನ್ನು ಮಾತನಾಡುತ್ತಿದ್ದಾರೆ. ಕೆಂಪೇಗೌಡರ ತಂದೆ ಕೆಂಪನಂಜೇಗೌಡರಿಗೆ ಕೃಷ್ಣದೇವರಾಯ ಅಮರನಾಯಕ ಎಂಬ ಬಿರುದು ನೀಡಿದ್ದಾರೆ. ಈ ಬಗ್ಗೆ ಕಲ್ಯದ ಶಾಸನದಲ್ಲಿ ಉಲ್ಲೇಖವಿದೆ. ಕಲ್ಯ ಶಾಸನವನ್ನು ಅಧ್ಯಯನ ಮಾಡಿದರೆ ಇವುಗಳ ಬಗ್ಗೆ ತಿಳಿಯುತ್ತದೆ ಎಂದು ತಿಳಿಸಿದರು.
ಅಚ್ಚುತರಾಯರು ನೀಡಿದ ಚಿನ್ನದ ನಾಣ್ಯಗಳನ್ನು ಬಳಸಿಕೊಂಡು ವಿಜಯನಗರದ ಕಾಲಘಟ್ಟದಲ್ಲಿ ಬೆಂಗಳೂರಿನ ಕೋಟೆ ಮಾತ್ರ ನಿರ್ಮಾಣವಾಯಿತು. ಈ ಕೋಟೆಯಲ್ಲಿ ಮಾತ್ರ ಸಾಮಾನ್ಯ ಜನರಿಗೂ ಪ್ರವೇಶವಿತ್ತು. ಶೇ.10ರಷ್ಟು ಸ್ಥಳದಲ್ಲಿ ಅವರು ಇದ್ದು, ಬಾಕಿ ಶೇ.90ರಷ್ಟು ಸ್ಥಳದಲ್ಲಿ 64 ಪೇಟೆಗಳನ್ನು ನಿರ್ಮಿಸಿ ನಾಡಿನ ಎಲ್ಲಾ ಜಾತಿ ಅವರಿಗೂ ಅವಕಾಶ ಕಲ್ಪಿಸಿಕೊಟ್ಟರು. ಹಾಗೆ ವಿವಿಧ ರಾಜ್ಯದ ಕರಕುಶಲದವರಿಗೂ ಅವಕಾಶ ಕಲ್ಪಿಸುವ ಮೂಲಕ ಸರ್ವಜನಾಂಗ ಶಾಂತಿಯ ದೊರೆಯಾಗಿದ್ದರು ಎಂದರು.
ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಅಭಿವೃದ್ದಿಗೆ ಹೆಗಲುಕೊಟ್ಟರು. 1608 ಕುಣಿಗಲ್‍ನ ಮೊಮ್ಮಗಳ ಮನೆಯಲ್ಲಿ ಇದ್ದಾಗ ಯಾರೋ ಯಲಹಂಕ ಸಂಸ್ಥಾನವನ್ನು ಆಕ್ರಮಿಸುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ 92 ವರ್ಷದ ಅವರು ಯುದ್ಧದಲ್ಲಿ ಪಾಲ್ಗೊಂಡು ವೀರಮರಣ ಹೊಂದಿದರು. ಇಂತಹ ವಿಷಯಗಳನ್ನು ಅಧ್ಯಯನ ಮಾಡಲು ಸರ್ಕಾರ ಅನುದಾನ ನೀಡಬೇಕು. ವಿವಿಗಳಲ್ಲಿ ಅನುದಾನಕ್ಕೆ ಕೊರತೆ ಇರಬಾರದು. ಸರ್ಕಾರ ಇತಿಹಾಸದ ಸಂರಕ್ಷಣೆ ಬಗ್ಗೆ ತಿಳಿಸಿದಾಗ ಕಾಮಗಾರಿಗಳ ತಲೆಕೆಡಿಸಿಕೊಳ್ಳುತ್ತಾರೆ. ಅದರ ಬದಲು ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿಬೇಕಿದೆ ಎಂದು ತಿಳಿಸಿದರು.
ಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಮುಕ್ತ ವಿವಿ ಕುಲಪತಿ ಶರಣಪ್ಪ ವಿ.ಹಲಸೆ ಸೇರಿದಂತೆ ಹಲವರಯ ಇದ್ದರು.