ಬ್ಯಾಂಕುಗಳ ಧೋರಣೆ ಬದಲಾಗದಿದ್ದರೆ ಹೋರಾಟ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.11: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ರೈತರಿಗೆ ಸಂದಾಯವಾಗುತ್ತಿರುವ ಸಹಾಯಧನದ ಹಣವನ್ನು ರೈತರ ಸಾಲಕ್ಕಾಗಿ ಹಿಡಿದುಕೊಳ್ಳಬಾರದೆಂಬ ಸ್ಪಷ್ಟ ನಿರ್ದೇಶನವಿದ್ದರೂ ತಾಲೂಕಿನ ಕೆಲವು ಬ್ಯಾಂಕುಗಳು ರೈತರ ಸಹಾಯಧನದ ಹಣವನ್ನು ಸಾಲಕ್ಕಾಗಿ ಹಿಡಿದುಕೊಳ್ಳುತ್ತಿವೆ. ಬ್ಯಾಂಕುಗಳ ಧೋರಣೆ ಬದಲಾಗದಿದ್ದರೆ ರೈತರನ್ನು ವಂಚಿಸುತ್ತಿರುವ ಬ್ಯಾಂಕುಗಳ ಮುಂದೆ ಹೋರಾಟ ಆರಂಭಿಸುವುದಾಗಿ ತಾಲೂಕು ರೈತಸಂಘ ಎಚ್ಚರಿಸಿದೆ.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಬ್ಯಾಂಕುಗಳ ಶೋಷಣೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಅನುಕೂಲಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿ ಸಹಾಯಧನ ನೀಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿವೆ. ರೈತರ ಖಾತೆಗೆ ಜಮೆಯಾದ ಯಾವುದೇ ಸಹಾಯಧನದ ಹಣವನ್ನು ರೈತರ ಸಾಲಕ್ಕಾಗಿ ಜಮೆ ಮಾಡಿಕೊಳ್ಳಬಾರದೆಂದು ಭಾರತೀಯ ರಿಸರ್ವ್ ಬ್ಯಾಂಕ್ ರಾಷ್ಟ್ರದ ಎಲ್ಲಾ ಬ್ಯಾಂಕುಗಳಿಗೂ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ ತಾಲೂಕಿನ ಎಸ್.ಬಿ.ಐ ಸೇರಿದಂತೆ ಕೆಲವು ಬ್ಯಾಂಕುಗಳು ಆರ್.ಬಿ.ಐ ನಿರ್ದೇಶನವನ್ನು ಪಾಲಿಸದೆ ರೈತರ ಸಹಾಯಧನದ ಹಣವನ್ನು ಸಾಲಕ್ಕೆ ವಜಾ ಮಾಡಿಕೊಂಡು ರೈತರಿಗೆ ವಂಚನೆ ಮಾಡುತ್ತಿವೆ. ಉದಾಹರಣೆಗೆ ತಾಲೂಕಿನ ಕಿಕ್ಕೇರಿ ಹೋಬಳಿಯ ಸಿದ್ದಾಪುರ ಗ್ರಾಮದ ರೈತ ಸತೀಶ ಎನ್ನುವವರು ಕಿಕ್ಕೇರಿಯ ಎಸ್.ಬಿ.ಐ ಶಾಖೆಯಿಂದ 1.25 ಲಕ್ಷ ರೂ ಬೆಳೆ ಸಾಲ ಪಡೆದಿದ್ದಾರೆ. ತಾಲೂಕಿನಲ್ಲಿ ಈ ಹಿಂದೆ ಕಾಣಿಸಿಕೊಂಡ ತೀವ್ರ ಬರಗಾಲ ಮತ್ತು ಅತಿವೃಷ್ಠಿಯಿಂದ ಇವರು ಬೆಳೆ ನಷ್ಟಕ್ಕೆ ಒಳಗಾಗಿದ್ದು ಬ್ಯಾಂಕಿನ ಸಾಲ ತೀರುವಳಿ ಮಾಡಿಲ್ಲ. ಸಾಲ ಮರುಪಾವತಿಸಿಲ್ಲ ಎನ್ನುವ ಕಾರಣಕ್ಕೆ ಕಿಕ್ಕೇರಿಯ ಎಸ್.ಬಿ.ಐ ಬ್ಯಾಂಕಿನವರು ರೈತ ಸತೀಶ್ ಅವರ ಖಾತೆಗೆ ಜಮೆಯಾಗಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ, ನರೇಗಾ ಯೋಜನೆಯ ಮೂಲಕ ಬೆಳೆದಿದ್ದ ಬಾಳೆ ಬೇಸಾಯದ ಸಪ್ಲೆ ಬಿಲ್ ಹಣವನ್ನು ರೈತರಿಗೆ ನೀಡದೆ ಲಾಕ್ ಮಾಡಿದ್ದಾರೆ. ಇದೇ ರೀತಿ ರಾಮೇನಹಳ್ಳಿಯ ಕುಮಾರ್ ಎನ್ನುವ ರೈತರು ಕಿಕ್ಕೇರಿಯ ಎಸ್.ಬಿ.ಐ ಶಾಖೆಯಿಂದ 1.80 ಲಕ್ಷ ರೂ ಬೆಳೆ ಸಾಲ ಪಡೆದಿದ್ದಾರೆ. ಕುಮಾರ್ ಅವರು ತಾವು ಬೆಳೆದ ರಾಗಿಯನ್ನು ರಾಗಿ ಖರೀದಿ ಕೇಂದ್ರದ ಮೂಲಕ ಮಾರಾಟ ಮಾಡಿದ್ದರು. ಖರೀದಿ ಕೇಂದ್ರದ ಮೂಲಕ ರಾಗಿ ಮಾರಾಟದ ಹಣ 55 ಸಾವಿರ ರೂ ಕಿಕ್ಕೇರಿಯ ಎಸ್.ಬಿ.ಐ ಬ್ಯಾಂಕಿನ ರೈತ ಕುಮಾರ್ ಅವರ ಖಾತೆಗೆ ಜಮೆಯಾಗಿದೆ.
ಇದರ ಜೊತೆಗೆ ರೈತ ಕುಮಾರ್ ಅವರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮತ್ತು ನರೇಗಾ ಯೋಜನೆಯ ಸಪ್ಲೆ ಬಿಲ್ ಸೇರಿ ಲಕ್ಷಾಂತರ ರೂ ಬಂದಿದ್ದು ಅದೆಲ್ಲವೂ ಕಿಕ್ಕೇರಿಯ ಎಸ್.ಬಿ.ಐ ಬ್ಯಾಂಕಿನಲ್ಲಿ ಜಮೆಯಾಗಿದೆ. ಆದರೆ ಬ್ಯಾಂಕಿನ ವ್ಯವಸ್ಥಾಪರು ರೈತರ ಸಹಾಯಧನ ಹಣ ಮತ್ತು ರಾಗಿ ಮಾರಾಟದ ಹಣವನ್ನು ರೈತರಿಗೆ ನೀಡದೆ ಲಾಕ್ ಮಾಡಿಕೊಂಡಿದ್ದಾರೆ. ತಾಲೂಕಿನಾದ್ಯಂತ ಇಂತಹ ನೂರಾರು ಪ್ರಕರಣಗಳು ರೈತಸಂಘಕ್ಕೆ ತಿಳಿದು ಬಂದಿದೆ. ತಕ್ಷಣವೇ ಬ್ಯಾಂಕುಗಳ ವ್ಯವಸ್ಥಾಪಕರು ರೈತರ ಸಹಾಯಧನದ ಹಣವನ್ನು ಪಾವತಿಸಬೇಕು. ರಿಸರ್ವ್ ಬ್ಯಾಂಕ್ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸದೆ ರೈತರಿಗೆ ಕಿರುಕುಳ ನೀಡುತ್ತಿರುವ ಬ್ಯಾಂಕುಗಳ ವಿರುದ್ದ ರೈತಸಂಘ ಬೀದಿ ಹೋರಾಟಕ್ಕಿಳಿಯಲಿದೆ. ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ತಾಲೂಕು ಆಡಳಿತ ಮದ್ಯ ಪ್ರವೇಶ ಮಾಡಬೇಕು. ತಾಲೂಕಿನ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರ ಸಭೆ ಕರೆದು ಕೇಂದ್ರ ಬ್ಯಾಂಕಿನ ಆದೇಶಕ್ಕೆ ಸೆಡ್ಡು ಹೊಡೆದು ರೈತರಿಗೆ ಕಿರುಕುಳ ನಿಡುತ್ತಿರುವ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿ ರೈತರ ನೆರವಿಗೆ ನಿಲ್ಲಬೇಕು ಎಂದು ಕಾರಿಗನಹಳ್ಳಿ ಪುಟ್ಟೇಗೌಡ ಆಗ್ರಹಿಸಿದರು.