ಮಹಿಳೆಯರು ಸಕ್ರಿಯವಾಗಿ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿರಬೇಕು : ಅಶ್ವಥ್‍ನಾರಾಯಣ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.11- ಮಹಿಳೆಯರು ರಾಷ್ಟ್ರದ ಶಕ್ತಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಬೆಂಬಲಿಸುವ ಜೊತೆಗೆ ಹೆಚ್ಚಿನ ರೀತಿಯಲ್ಲಿ ಮಹಿಳಾ ಸದಸ್ಯತ್ವವನ್ನು ಹೊಂದಿ ಸಕ್ರಿಯವಾಗಿ ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಆಶ್ವಥ್‍ನಾರಾಯಣ್ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾದಿಂದ ನಡೆದ ಬಿಜೆಪಿ ಸದಸ್ಯತಾ ಅಭಿಯಾನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಮಹಿಳೆಯರಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಪ್ರತಿ ಅಭಿವೃದ್ದಿ ಕಾರ್ಯದಲ್ಲಿ ಮಹಿಳೆಯ ಪಾತ್ರವನ್ನು ಹೆಚ್ಚು ಮಾಡುತ್ತಿದೆ. ಈ ನಿಟ್ಟಿನಲ್ಲಿ ಈ ನಡೆಯುವ ಸದಸ್ಯತ್ವ ಅಭಿಯಾನದಲ್ಲಿ ಪ್ರತಿ ಮಹಿಳೆಯರು ಬಿಜೆಪಿ ಸದಸ್ಯತ್ವ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಕಾರ್ಯನಿರ್ವಹಿಸಬೇಕು ಎಂದರು.
ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಬಿಜೆಪಿ ಮಂಡಲಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸದಸ್ಯತಾ ಅಭಿಯಾನ ಮಾಡುವಾಗ ಪ್ರತಿ ಮನೆ ಮನೆಗೆ ಭೇಟಿ ನೀಡಿ ಬಿಜೆಪಿ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಜಾಗೃತಿ ಮೂಡಿಡಬೇಕು. ನಾವು ಏಕೆ ಬಿಜೆಪಿಯನ್ನು ಬೆಂಬಲಿಸಬೇಕು, ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸವಿವರವಾಗಿ ತಿಳಿಸಬೇಕು ಎಂದರು.
ಉಜ್ವಲ ಗ್ಯಾಸ್ ಯೋಜನೆ, ಲಕ್ಷಾಧಿಪತಿ ದೀದಿ, ಪ್ರಧಾನಮಂತ್ರಿ ಅವಾಸ್ ಯೋಜನೆ, ಹೆಣ್ಣು ಮಕ್ಕಳನ್ನು ರಕ್ಷಣೆ ಕುರಿತು ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಚಿದರ್ಭದಲ್ಲಿ ಜಾರಿ ಮಾಡಿದ್ದ ಹೆಣ್ಣು ಮಕ್ಕಳ ವಿಮೆ ಯೋಜನೆ, ಹೆಣ್ಣು ಮಕ್ಕಳು ಸೈಕಲ್ ವಿತರಣೆ ಮಾಡಿದ ಪರಿಣಾಮ ಗ್ರಾಮಾಂತರ ಪ್ರದೇಶದ ಬಹಳಷ್ಟು ಹೆಣ್ಣು ಮಕ್ಕಳು ಇಂದು ಪದವಿ ಪಡೆಯಲು ಸಾಧ್ಯವಾಗಿದೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಲೆಯೂರು ಕಮಲಮ್ಮ ಮಾತನಾಡಿ, ಜಿಲ್ಲೆಯಲ್ಲಿ ಮಹಿಳಾ ಮೊರ್ಚಾದಿಂದ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಪ್ರತಿ ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು ತಮ್ಮ ಬೂತ್ ಹಾಗೂ ಶಕ್ತಿ ಕೇಂದ್ರಗಳಲ್ಲಿ ಮಿಸ್ ಕಾಲ್ ಮೂಲಕ ಸದಸ್ಯತ್ವವನ್ನು ಪಡೆದುಕೊಳ್ಳಬೇಕು. ಆಯಾ ಮಂಡಲದ ಅಧ್ಯಕ್ಷರು ಜವಾಬ್ದಾರಿ ತೆಗೆದುಕೊಂಡು ಹೆಚ್ಚು ಮಹಿಳೆಯರಿಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ನೀಡುವ ಮೂಲಕ ಪ್ರಧಾನಿ ಮೋದಿ ಅವರು ಕೈ ಬಲಪಡಿಸಬೇಕು ಎಂದು ಎಂದರು.
ಕಾರ್ಯಕ್ರಮಗಳನ್ನು ರೂಪಿಸುವಹಾಗೂ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗುವ ಮೂಲಕ ಉದ್ದೇಶದಿಂದ ಶೇಕಡ 50 ರಷ್ಟು ಮೀಸಲಾತಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಹೊಂದಬೇಕು ಎಂದರು.
ಕಾರ್ಯಾಗಾರದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಜಯಶೀಲಾ ರಾಜಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೈಲಾ, ಜಿಲ್ಲಾ ಕಾರ್ಯದರ್ಶಿ ಪದ್ಮ, ಮಂಡಲದ ಅಧ್ಯಕ್ಷರಾದ ಚಾ.ನಗರ ಮಹೇಶ್ವರಿ ಹಾಜರಿದ್ದರು.