ವರ್ಣ ರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ
ಸಂಜೆವಾಣಿ ನ್ಯೂಸ್
ಮೈಸೂರು: ಅ.04:- ನಾಡಹಬ್ಬ ದಸರಾ ಸಂದರ್ಭದಲ್ಲಿ ಪ್ರತಿ ವರ್ಷವೂ ಕೂಡ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದೆ ಅದೇ ರೀತಿ ಈ ಬಾರಿಯೂ ಕೂಡ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಈ ಪ್ರಶಸ್ತಿಯನ್ನು ಸರ್ಕಾರವು ತನ್ನನ್ನು ತಾನೇ ಗೌರವಿಸಿಕೊಂಡಂತೆ ಸೂಚಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಅರಮನೆ ಆವರಣದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಆಯೋಜಿಸಿದ್ದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾಂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಬಾರಿ ಅತ್ಯಂತ ಸುಂದರವಾದ ದಸರಾ ಕಾರ್ಯಕ್ರಮಗಳನ್ನು ಆಯೋಜಿಸಿ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಲಾಗಿದೆ. ವರ್ಣ ರಂಜಿತವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಚಾಲನೆ ದೊರಕಿದೆ .
ಈ ದಿನ ಹಿರಿಯ ಸಾಹಿತಿಗಳಾದ ನಾಡೋಜ ಡಾಕ್ಟರ್ ಹಂಪಾ ನಾಗರಾಜಯ್ಯ ಅವರಿಂದ ದಸರಾ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಲಾಯಿತು ಮತ್ತು ಅರಮನೆ ವೇದಿಕೆಯಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾಜ್ಯ ಸಂಗೀತ ವಿದ್ವಾಂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅತ್ಯಂತ ಸಂತೋಷದಿಂದ ದಸರಾ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಿದ್ದೇನೆ ಎಂದು ಘೋಷಣೆ ಮಾಡಿದರು.
ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಪಂಡಿತ್ ಬಸವರಾಜ ಭಜಂತ್ರಿ ಅವರಿಗೆ ಸರ್ಕಾರವೂ ನೀಡಿದೆ. ಪ್ರತಿ ಬಾರಿ ದಸರಾ ಆಚರಣೆ ಮಾಡುವ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಸಾಧಕರನ್ನು ಗುರುತಿಸಿ ನೀಡಲಾಗುವುದು ಅದೇ ರೀತಿ ಶಹನಾಯಿ ಸಂಗೀತ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಸಾಧನೆಗೈದವರು ಪಂಡಿತ್ ಬಸವರಾಜ್ ಭಜಂತ್ರಿ ಅವರು. ಇವರು ದೇಶ ವಿದೇಶಗಳಲ್ಲಿ ತಮ್ಮ ಶಹನಾಯಿ ಸಂಗೀತದಿಂದ ಪ್ರಖ್ಯಾತಿಯನ್ನು ಪಡೆದಿದ್ದಾರೆ ಹಾಗೂ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ನೀಡುತ್ತಿರುವ ಪಂಡಿತ್ ಬಸವರಾಜ ಭಜಂತ್ರಿ ಅವರನ್ನು ಗುರುತಿಸಿ ಸರ್ಕಾರವು ಈ ವರ್ಷದ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ನೀಡಿದೆ ಎಂದು ತಿಳಿಸಿದರು.
ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಮಾತನಾಡಿ ನಮ್ಮ ರಾಜಕೀಯದ ಕೆಲಸಗಳನ್ನೆಲ್ಲ ಹೊರತು ಪಡಿಸಿ ದಸರಾ ಕಾರ್ಯಕ್ರಮವನ್ನು ಸವಿಯಬೇಕು ಎಂದು ನಮಗೂ ಆಸೆ. ಮೈಸೂರು ಜನರಿಗೆ ಇರುವಷ್ಟು ಭಾಗ್ಯ ಅದೃಷ್ಟ ಬೇರೆ ಯಾವ ಜನತೆಗೂ ಕೂಡ ಇಲ್ಲ. ದಸರಾದ ದಿನಗಳಂದು ಮೈಸೂರಿನ ಜನರು ವಿವಿಧ ಕಾರ್ಯಕ್ರಮಗಳನ್ನು ಸವಿಯುತ್ತಾ ಕಲೆಯನ್ನು ಆರಾಧನೆ ಮಾಡುತ್ತಾರೆ.
ಕಲೆಯ ಆರಾಧನೆಯೇ ನಮ್ಮ ಮೈಸೂರು ದಸರಾ ಎಂದರು ತಪ್ಪಾಗದು. ನಾಡಿನ ಸಂಸ್ಕೃತಿಯನ್ನು ಸಾರುವುದೇ ಈ ನಮ್ಮ ನಾಡಹಬ್ಬ ದಸರಾ ವಾಗಿದೆ. ಪ್ರತಿಯೊಂದು ವಸ್ತುವಿನಿಂದ ಒಂದೊಂದು ರೀತಿಯ ಕಲಾ ಕೃತಿಯನ್ನು ಸೃಷ್ಟಿಸಬಹುದು. ಚಾಮರಾಜನಗರ ಕಾಡಿನಿಂದ ತಂದಂತ ಒಂದು ಬಿದಿರು ಕೊಳಲಿನ ಆಕೃತಿಯನ್ನು ಪಡೆದು ಕೃಷ್ಣನ ಜೊತೆ ಸೇರಿತ್ತು ಹಾಗೆ ಪ್ರತಿಯೊಂದು ವಸ್ತುವಿನಲ್ಲಿ ಕೂಡ ವಿಶೇಷತೆ ಇದೆ ಎಂದರು.
ಪ್ರತಿಯೊಬ್ಬರೂ ಕೂಡ ದಸರಾ ಆಚರಣೆಯಲ್ಲಿ ಪಾಲ್ಗೊಂಡು ಅತ್ಯಂತ ಯಶಸ್ವಿಯಾಗಿ ದಸರಾದ ಪ್ರತಿಯೊಂದು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದರು.
ಖ್ಯಾತ ಶಹನಾಯಿ ಕಲಾವಿದರು ಮತ್ತು ಸಂಗೀತ ವಿದ್ವಾನ್ ಪ್ರಶಸ್ತಿ ಪುರಸ್ಕೃತರಾದ ಪಂಡಿತ್ ಬಸವರಾಜು ಭಜಂತ್ರಿ ಅವರು ಮಾತನಾಡಿ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಸಾಮಾನ್ಯ ವ್ಯಕ್ತಿಗಳನ್ನು ಅವರ ಸಾಧನೆಗಳನ್ನು ಗುರುತಿಸಿ ಸರ್ಕಾರವು ಗೌರವ ಸೂಚಿಸುತ್ತಿರುವುದು ಪ್ರತಿಯೊಬ್ಬ ಕಲಾವಿದರು ಸಂತೋಷದ ವಿಷಯ. ನಮ್ಮ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಇನ್ನಿತರರಿಗೆ ಧನ್ಯವಾದಗಳು, ಈ ಹಿಂದೆ ವಿವಿಧ ಕಲಾವಿದರುಗಳು ಪ್ರಶಸ್ತಿಗಳಿಗೆ ಅರ್ಜಿಯನ್ನು ನೀಡಿದರು ಆದರೆ ನಾನು ಯಾವುದೇ ಅರ್ಜಿಯನ್ನು ನೀಡಿರಲಿಲ್ಲ ಸಿದ್ದರಾಮಯ್ಯನವರು ನನ್ನ ಕಲೆಯನ್ನು ಗುರುತಿಸಿ ಈ ದಿನ ಪ್ರಶಸ್ತಿ ಪ್ರಧಾನವನ್ನು ಮಾಡಿರುವುದು ನನಗೆ ತುಂಬಾ ಸಂತೋಷವನ್ನು ತಂದುಕೊಟ್ಟಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸರವರು ಮೈಸೂರು ದಸರಾಕ್ಕೆ ಅಪಾರವಾದ ಇತಿಹಾಸವಿದೆ ಇತಿಹಾಸದ ಕ್ಷಣಗಳನ್ನು ಪ್ರತಿ ಬಾರಿಯೂ ಮೇಲಕು ಹಾಕುವುದು ನಮ್ಮ ಕರ್ತವ್ಯವಾಗಿದೆ ಈ ಹಿಂದೆ ಮೈಸೂರು ಸಂಸ್ಥಾನದಲ್ಲಿ ದಸರಾ ಸಂದರ್ಭದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂಬುದು ವಿವಿಧ ವಿದ್ವಾಂಸರ ಆಸೆಯಾಗಿತ್ತು. ಅದೇ ರೀತಿಯಲ್ಲಿ ನಮ್ಮ ಸರ್ಕಾರಗಳು ಪ್ರತಿ ಬಾರಿ ದಸರಾ ಸಂದರ್ಭದಲ್ಲಿ ಅರಮನೆ ವೇದಿಕೆಯಲ್ಲಿ ಉತ್ತಮವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಿ ದಸರಾ ಹೀಗೆ ಮೆರಗು ತರುವಂತೆ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಶಹನಾಯಿ ಸಂಗೀತ ಕ್ಷೇತ್ರದಲ್ಲಿ ಮಹಾನ್ ಸಾಧನೆಗೈದ ಪಂಡಿತ್ ಬಸವರಾಜ ಭಜಂತ್ರಿ ಅವರಿಗೆ ಸಂಗೀತ ವಿದ್ವಾಂ ಪ್ರಶಸ್ತಿ ನೀಡಿರುವುದು ಅತ್ಯಂತ ಪ್ರಮುಖ ಅಂಶವಾಗಿದೆ. ಕಲಾವಿದರನ್ನು ಗುರುತಿಸಿ, ಅವರಿಗೆ ಗೌರವ ಸಮರ್ಪಣೆ ಮಾಡುವಲ್ಲಿ ಸಿದ್ದರಾಮಯ್ಯ ನವರ ನೇತೃತ್ವದ ಸರ್ಕಾರವು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮಹದೇವಪ್ಪ ಮತ್ತು ಮಲ್ಲೇಶಯ್ಯ ತಂಡದಿಂದ ನಂದಿ ಧ್ವಜ ಕುಣಿತ, ಸಿದ್ದಾರ್ಥ ಮತ್ತು ತಂಡದಿಂದ ವೀರಗಾಸೆ ಪ್ರದರ್ಶನ, ಗುರು ರಾಜ್ ಮತ್ತು ತಂಡದಿಂದ ಮಂಗಳವಾದ್ಯ, ಹಾಗೂ ಮೈಸೂರು ಸಂಸ್ಥಾನದ ಮಹಾನ್ ವ್ಯಕ್ತಿಯಾದ ನಾಲ್ವಡಿ ಕೃಷ್ಣರಾಜ ಅವರು ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಕೈಗೊಂಡ ಹಲವಾರು ಕಾರ್ಯಕ್ರಮಗಳ ಕುರಿತು ವಿವಿಧ ಭಾವಗೀತೆಗಳ ಮೂಲಕ ಅರಮನೆ ಅಂಗಳದಲ್ಲಿ ನೆರೆದಿದ್ದ ವಿವಿಧ ರಾಜ್ಯ ಹಾಗೂ ದೇಶದ ಜನತೆಗೆ ತಿಳಿಸಿ ಕೊಡುವ ಪ್ರಯತ್ನವನ್ನು ಸಿದ್ದರಾಜು ಮತ್ತು ಗೀತಾ ಗಾಯಕರ ತಂಡವು ಮಾಡಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್, ಶಾಸಕರಾದ ಡಿ. ರವಿಶಂಕರ್, ಕೃಷ್ಣಮೂರ್ತಿ ಹಾಗೂ ವಿಧಾನಪರಿಷತ್ ಶಾಸಕರಾದ ಡಾ. ತಿಮ್ಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಧರಣಿ ದೇವಿ ಮಾಲಗತ್ತಿ, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮಿ ಕಾಂತ ರೆಡ್ಡಿ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಾಯಿತ್ರಿ ಕೆ ಎಂ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.