ವ್ಯಕ್ತಿ ಕೊಲೆ: ಇಬ್ಬರು ಆರೋಪಿಗಳ ಬಂಧನ
ಕಲಬುರಗಿ,ಸೆ.10-ನಗರ ಹೊರವಲಯದ ಕೆಸರಟಗಿ ಉದ್ಯಾನವನ ಬಳಿಯ ರೈಲ್ವೆ ಕೆಳ ಸೇತುವೆ ಹತ್ತಿರ ಸೆ.7 ರಂದು ನಡೆದ ಕೆಸರಟಗಿ ಆಶ್ರಯ ಕಾಲೋನಿಯ ಕಪೀಲ್ ತಂದೆ ತಂದೆ ಲಕ್ಷ್ಮಣ ಗಾಯಕವಾಡ (35) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಶ್ವವಿದ್ಯಾಲಯ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ತಾಲ್ಲೂಕಿನ ಪಟ್ಟಣ ಗ್ರಾಮದ ಜೈಭೀಮ ತಂದೆ ನಾಗಪ್ಪಾ ನ್ಯಾಮನ್ (25) ಮತ್ತು ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರ ಗ್ರಾಮದ ದತ್ತಾತ್ರೇಯ ತಂದೆ ದೇವಿಂದ್ರಪ್ಪಾ ದೊಡಮನಿ (20) ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೊಲೆಯಾದ ಕಪೀಲ್ ಪತ್ನಿ ಭಾಗ್ಯಶ್ರೀ ಪರಾರಿಯಾಗಿದ್ದು, ಅವಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಘಟನೆ ವಿವರ: ಸೆ.7 ರಂದು ರಾತ್ರಿ 9.30ರ ಸುಮಾರಿಗೆ ಕೆಸರಟಗಿ ಆಶ್ರಯ ಕಾಲೋನಿಯ ಕಪೀಲ್ ಗಾಯಕವಾಡ ಮತ್ತು ಆತನ ಪತ್ನಿ ಭಾಗ್ಯಶ್ರೀ ನಡೆಯುತ್ತ ಹೋಗುತ್ತಿದ್ದರು. ಈ ವೇಳೆ ಮಳೆ ಬಂದಿದ್ದರಿಂದ ಇಬ್ಬರು ಆಶ್ರಯಕ್ಕಾಗಿ ಕೆಸರಟಗಿ ಉದ್ಯಾನವನ ಹತ್ತಿರದ ರೈಲ್ವೆ ಕೆಳ ಸೇತುವೆ ಬಳಿ ನಿಂತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ಚಾಕುವಿನಿಂದ ಇರಿದು ಕಪೀಲ್‍ನನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಮೃತನ ತಾಯಿ ಶಾರದಾ ಗಾಯಕವಾಡ ಅವರು ನೀಡಿದ ದೂರಿನ ಮೇರೆಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ಕಲಬುರಗಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಡಿ.ಜಿ.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಪಿಐ ಸುಶೀಲಕುಮಾರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಂಜಯಕುಮಾರ, ಪ್ರಕಾಶ, ಈರಣ್ಣ, ಕಿಶೋರ, ಸುಲ್ತಾನ್, ಪ್ರಕಾಶ, ರಾಜಕುಮಾರ ಅವರನ್ನೊಳಗೊಂಡ ತಂಡ ತನಿಖೆ ನಡೆಸಿ ಕೊಲೆ ಆರೋಪಿಗಳಾದ ಜೈಭೀಮ ನ್ಯಾಮನ್ ಮತ್ತು ದತ್ತಾತ್ರೇಯ ದೊಡ್ಡಮನಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕೊಲೆಯಾದ ಕಪೀಲ್ ಪತ್ನಿ ಭಾಗ್ಯಶ್ರೀ ಜೊತೆ ಜೈಭೀಮ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಈ ವಿಷಯ ಕಪೀಲ್‍ಗೆ ಗೊತ್ತಾಗಿ ಜೈಭೀಮಗೆ ಹೆದರಿಸಿ ಬಂದಿದ್ದರಿಂದ ಭಾಗ್ಯಶ್ರೀ ಮತ್ತು ಜೈಭೀಮ ಇಬ್ಬರು ಉಪಾಯ ಮಾಡಿ ಕಪೀಲ್ ಕೊಲೆಗೆ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂಬುದು ಪೊಲೀಸರು ನಡೆಸಿದ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಪ್ರಕರಣ ನಡೆದ 24 ಗಂಟೆಯಲ್ಲಿ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ. ಶ್ಲಾಘಿಸಿದ್ದಾರೆ.