ಚಿಂಚೋಳಿಯಲ್ಲೊಂದು ವಿಶೇಷ ಗಣೇಶೋತ್ಸವ; ಹೆತ್ತವರಿಗೆ ಪಾದ ಪೂಜೆಯ ವಿನೂತನ ನಮನ
ಚಿಂಚೋಳಿ, ಸೆ.10- ಹೆತ್ತ ತಂದೆ ತಾಯಿಗಳ ಪಾದಕ್ಕೆ ಪೂಜೆಯನ್ನು ಸಲ್ಲಿಸುವುದರ ಮೂಲಕ ವಿಶೇಷವಾಗಿ ಗಣೇಶೋತ್ಸವನ್ನು ಕಾರ್ಯಕ್ರಮ ಜರುಗಿತು.
ಚಿಂಚೋಳಿಯ ಶ್ರೀ ಮಹಾಂತೇಶ್ವರ ಮಠದಲ್ಲಿ ಹಮ್ಮಿಕೊಂಡ ಗಣೇಶೋತ್ಸವದ ಅಂಗವಾಗಿ ಗಜಾನನ ನವ ಯುವಕ ಸಂಘ ಆಯೋಜಿಸಿದ್ದ ತಂದೆ ತಾಯಿ ಪಾದ ಪೂಜೆ ಎನ್ನುವ ಕಾರ್ಯಕ್ರಮದಲ್ಲಿ ಜನ್ಮ ಕೊಟ್ಟ ತಂದೆ ತಾಯಿಗಳ ಪಾದಗಳನ್ನು ತಾಮ್ರದ ತಟ್ಟೆಯಲ್ಲಿ ತೊಳೆದು ಪುಷ್ಪಗಳಿಂದ ಪೂಜೆ ಸಲ್ಲಿಸಿ ವಿಶೇಷವಾಗಿ ನಮನವನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಮುಖಂಡ ನಾಗರಾಜ ಮಲಕೂಡ ಅವರು, ನಾವೆಲ್ಲರೂ ಕೇಳಿದಂತಹ ದಂತಕಥೆಗಳಲ್ಲಿ ಗಣೇಶನು ಜಗತ್ತನ್ನು ಸುತ್ತುಕೊಂಡು ಬರುವುದಕ್ಕಿಂತ ತಂದೆ-ತಾಯಿಗಳಿಗೆ ಸುತ್ತಿದರೆ ಜಗತ್ತನ್ನೇ ಸುತ್ತಿದಂತೆ ತಂದೆ ತಾಯಿಗಳೆ ಜಗತ್ತು ಅವರಿಗಿಂತ ದೊಡ್ಡದಾದ ಜಗತ್ತು ಮತ್ತೊಂದಿಲ್ಲ ಎನ್ನುವಂತಹ ಸಂದೇಶವನ್ನು ಕೊಟ್ಟಿದ್ದರ ನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಹಿರಿಯ ಮುಖಂಡರಾದ ಗೋಪಾಲರಾವ ಕಟ್ಟಿಮನಿ ಮಾತನಾಡಿ, ತಾಲ್ಲೂಕಿನ ಇತಿಹಾಸದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಇದೆ ಮೊದಲು ಇದೊಂದು ನಿಜವಾಗಿಯೂ ಅರ್ಥಪೂರ್ಣ ಮತ್ತು ವಿನೂತನ ಕಾರ್ಯಕ್ರಮ ತಂದೆ-ತಾಯಿಗಳು ಮಕ್ಕಳನ್ನು ಬಹಳ ಮುದ್ದಿನಿಂದ ಬೆಳೆಸುತ್ತಾರೆ ಆದರೇ ಮಕ್ಕಳು ಬೆಳೆದು ದೊಡ್ಡವರಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಂತೆ ತಂದೆ ತಾಯಿಗಳನ್ನು ತಾತ್ಸಾರ ಮನೋಭಾವನೆಯಿಂದ ನೋಡಿ ದೂರ ತಳ್ಳುವಂತಹ ವಾತಾವರಣ ಸೃಷ್ಟಿಯಾಗುತ್ತಿದೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ನೈತಿಕ ಅರಿವು ಉಂಟಾಗುತ್ತದೆ ಎಂದು ವಾಸ್ತವ ಬದುಕಿನ ಕುರಿತು ವಿಚಾರಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಐನಾಪೂರದ ಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಪೂಜ್ಯ ಪಂಚಾಕ್ಷರಿ ದೇವರು ಆಶೀರ್ವಚನ ನೀಡಿ, ಶಾಲೆಯಲ್ಲಿ ಪಾಠ ಹೇಳುವ ಗುರುಗಳು ಗುರುಗಳಾಗಬಾರದು ಬದಲಿಗೆ ಮಕ್ಕಳಿಗೆ ತಾಯಿ ಮೊದಲ ಗುರುವಾಗಬೇಕು ಮನೆಯೇ ಮೊದಲ ಪಾಠ ಶಾಲೆಯಾಗಬೇಕು, ತಂದೆ ತಾಯಿಗಳು ಸಂಸ್ಕಾರವಂತರಾಗಿದ್ದಾಗ ಮಾತ್ರ ಮಕ್ಕಳಿಗೆ ಸಂಸ್ಕಾರ ಕಲಿಸಲು ಸಾಧ್ಯ, ಮಕ್ಕಳು ಸಂಸ್ಕಾರವಂತರಾಗಲು ಸಾಧ್ಯ. ವಚನಕಾರ ಸರ್ವಜ್ಞನು ಕೂಡ ತನ್ನ ವಚನಗಳಲ್ಲಿ ತಾಯಿಯೊಬ್ಬಳು ಗುರುವಾಗಿ ನನ್ನ ಜೊತೆಯಲ್ಲಿದ್ದರೆ ನಾನು ಜಗತ್ತನ್ನೇ ಗೆಲ್ಲುತ್ತೇನೆಂದು ಹೇಳಿದ್ದಾನೆ. ಆದರೇ ಇಂದು ಕಣ್ಣಿಗೆ ಕಾಣುವ ದೇವರಾದ ಹೆತ್ತ ತಂದೆ ತಾಯಿಗಳನ್ನು ಅಸಡ್ಡೆಯಿಂದ ಬೆಲೆ ಕೊಡದೆ ದೂರ ತಳ್ಳಿ ಕಣ್ಣಿಗೆ ಕಾಣದ ದೇವರನ್ನು ಹುಡುಕುವುದರಲ್ಲಿ ಹೈರಾಣರಾಗುತ್ತಿದ್ದಾರೆ. ಯಾವ ಮನೆಯಲ್ಲಿ ತಾಯಿಯಾದವಳು ಗುರುವಾಗಿರುತ್ತಾಳೋ ಅಂತಹ ಮನೆಯಲ್ಲಿ ಮಹಾತ್ಮರು, ದಾರ್ಶನಿಕರು ಹುಟ್ಟಿಕೊಳ್ಳುತ್ತಾರೆ ಸಮಾಜವನ್ನು ಸರಿ ದಾರಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತಾರೆ. ಹೆತ್ತ ತಂದೆ ತಾಯಿಗಳ ಋಣವನ್ನು ತೀರಿಸುವುದಕ್ಕಂತೂ ಸಾಧ್ಯವಾಗುವುದಿಲ್ಲ ಆದರೇ, ಹೊತ್ತ ಈ ನೆಲದ ಈ ಸಮಾಜದ ಋಣವನ್ನು ತೀರಿಸುವಂತಹ ಉತ್ತಮ ರೀತಿಯ ಕೊಡುಗೆಗಳು ಸಾಮಾಜಿಕ ಕಾರ್ಯಗಳನ್ನಾದರೂ ಮಾಡಿದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕಗೊಳ್ಳುವುದು ಎಂದು ಸಾತ್ವಿಕಯ ವಿಚಾರಗಳ ಮೂಲಕ ಆಶೀರ್ವಚಿಸಿದರು.
ಬಳಿಕ ತಾಲ್ಲೂಕಿನಲ್ಲಿ ಸಂಗೀತ,ರಂಗಭೂಮಿ,ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮತ್ತು ಸಮಾಜದಲ್ಲಿನ ದೈನಂದಿನ ಘಟನೆಗಳನ್ನು ತಿಳಿಸಲು ಕಾರ್ಯನಿರ್ವಹಿಸುವ ಪತ್ರಕರ್ತರಿಗೂ ಸನ್ಮಾನ ಕಾರ್ಯಕ್ರಮವನ್ನು ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರಾದ ಸಂಗಪ್ಪ ಮಾಸ್ಟರ್ ಪಾಲಾಮೂರ ವಹಿಸಿಕೊಂಡಿದ್ದರೆ,ಅತಿಥಿಗಳಾಗಿ ಶಾಂತಪ್ಪವೀರಪ್ಪ ಸುಂಕದ,ಶ್ರೀನಿವಾಸ ಭಂಡಿ,ಶಂಕರಜೀ ಹಿಪ್ಪರಗಿ,ಭೀಮಶೆಟ್ಟಿ ಮುಕ್ಕಾ, ವೈದ್ಯರಾದ ಡಾ.ಸಂತೋಷ ಪಾಟೀಲ್ ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ಜಗನ್ನಾಥ ಡಿ.ಶೇರಿಕಾರ ನಿರೂಪಿಸಿದರು.ಇನ್ನು ಕಾರ್ಯಕ್ರಮದ ಆಯೋಜಕರಾದ ರಾಧಾಕೃಷ್ಣ ಕಳಸ್ಕರ,ಮನೋಜ ರೆಡ್ಡಿ,ಲಕ್ಷ್ಮೀಕಾಂತ ಓಲಗಿರಿ,ಕರಣರೆಡ್ಡಿ,ಮಣಿಕಂಠ ಸಿಳ್ಳಿನ ಸೇರಿದಂತೆ ನೂರಾರು ಮಹಿಳೆಯರು, ಯುವಕರು ಮತ್ತು ಮುದ್ದುಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.