ಕ್ರೀಡೆಯಲ್ಲಿ ಸಾಧನೆಗೈದು ಕೀರ್ತಿ ಹೆಚ್ಚಿಸಿ: ಶಿವಶರಣಪ್ಪ
ವಾಡಿ: ಸೆ.10:ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಯಾಗಿ ಸದೃಢ ಬದುಕು ಕಟ್ಟಿಕೊಳ್ಳಬಹುದಾಗಿದೆ ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ ಹೇಳಿದರು.
ಪಟ್ಟಣದ ಹೊರವಲಯದ ನ್ಯೂಟನ್ ಪ್ರದೇಶದಲ್ಲಿ ಸೋಮವಾರ 2024-25ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ನಾಲವಾರ ವಲಯ ಮಟ್ಟದ ಕ್ರೀಡಾಕೂಟ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ತುಂಬಾ ಸಹಕಾರಿಯಾಗಲಿವೆ. ಕ್ರೀಡೆಯಿಲ್ಲದಿದ್ದರೆ ದೇಹ ಅನಾರೋಗಕ್ಕೆ ತುತ್ತಾಗುತದೆ. ಮಕ್ಕಳು ಪಾಠ, ಪ್ರವಚನದೊಂದಿಗೆ ಆಟಕ್ಕೂ ಅಷ್ಟೇ ಮಹತ್ವ ನೀಡಬೇಕು. ಕ್ರೀಡಾಂಗಣದಲ್ಲಿ ಮಾತ್ರ ಕ್ರೀಡಾಪಟುಗಳು ವಿರೋಧಿಗಳು ಹೊರಗಡೆ ಹೋದಾಗ ಎಲ್ಲರೂ ಸ್ನೇಹಿತರೆಂದು ತಿಳಿಯಬೇಕು ಎಂದು ಮಕ್ಕಳಿಗೆ ಕೀವಿ ಮಾತು ಹೇಳಿದರು.
ಸೋಲು ಗೆಲವು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಸೋತಾಗ ಯಾರೂ ಎದೆಗುಂದದೆ ಸೋಲನ್ನು ಒಂದು ಸವಾಲಾಗಿ ಸ್ವೀಕರಿಸಿ ಗೆಲ್ಲುವ ಪ್ರಯತ್ನ ಮಾಡಬೇಕು ಸೋಲೆ ಗೆಲುವಿನ ಸೋಪಾನ ಎಂದು ಅರಿಯಬೇಕು ಎಂದರು.
ಸರ್ಕಾರಿ ನೌಕರ ಸಂಘದ ತಾಲೂಕು ಉಪಾಧ್ಯಕ್ಷ ವೆಂಕಟೇಶ್, ಗ್ರೇಡ್1.ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದೇವಿಂದ್ರ ರೆಡ್ಡಿ ದುಗುನೂರ್, ಡಾ.ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಉದಯ ಧರೇಣ್ಣನವರ್, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಶಂಕರ್ ರಾಠೋಡ, ಕಿತ್ತೂರ್ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲಕಿ ಕರುಣಾದೇವಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸ್ವರ್ಣಲತಾ ರೆಡ್ಡಿ, ಅಲಹಳ್ಳಿ ಸರಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಚಂದ್ರಮಪ್ಪ ಅಮನಗಡ್ಡಿ, ಅಬ್ದುಲ್ ಸಲಿಂ, ವಾಡಿ ವಲಯ ಸಿಆರ್‍ಪಿ ಸೂರ್ಯಕಾಂತ್ ದಿಗ್ಗಾವ್, ನಾಲವಾರ ವಲಯ ಸಿಆರ್‍ಪಿ ಸಂಜೀವ ಕುಮಾರ್, ದೈಹಿಕ ಶಿಕ್ಷಕ ವೀರಭದ್ರಪ್ಪ ಗುರುಮಠಕಲ್, ನಿಲಯ ಪಾಲಕ ನಾಗಪ್ಪ ಪೂಜಾರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಕ ಶ್ರೀನಾಥ ಹಿರಗುಂಡ ನಿರೂಪಿಸಿ, ವಂದಿಸಿದರು. ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞೆ ಬೋಧಿಸಲಾಯಿತು. ನಂತರ ವಿವಿಧ ಪ್ರೌಢ ಶಾಲೆಯ ಮಕ್ಕಳಿಂದ ಕಬ್ಬಡ್ಡಿ, ಖೊ, ಖೊ, ಥ್ರೋಬಾಲ್ ವಾಲಿಬಾಲ, ರನ್ನಿಂಗ್, ಉದ್ದ ಜಿಗಿತ, ಎತ್ತರ ಜಿಗಿತ ರೋಚಕ ಕ್ರೀಡೆಗಳು ಜರುಗಿದವು.