ಹನಿಟ್ರ್ಯಾಪ್ ಪ್ರಕರಣ ಸಿಬಿಐ ತನಿಖೆಗೆ ಒತ್ತಾಯ
ಕಲಬುರಗಿ,ಸೆ.10: ಇಡೀ ರಾಜ್ಯದ ಗಮನ ಸೆಳೆದಿರುವ ಕಲಬುರಗಿಯ ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಒತ್ತಾಯಿಸಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೆಲವು ಯುವತಿಯರನ್ನು ಬಳಸಿಕೊಂಡು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಉದ್ಯಮಿಗಳನ್ನು ಹನಿಟ್ರ್ಯಾಪ್ ಮೂಲಕ ಬ್ಲಾಕ್ ಮೇಲ್ ಮಾಡಲಾಗಿದೆ. ಹಾಗಾಗಿ ಇದೊಂದು ಅಂತರರಾಜ್ಯ ಪ್ರಕರಣ ಆಗಿರುವ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ಸಿಬಿಐಗೆ ವಹಿಸುವುದರಿಂದ ಪೂರ್ಣ ಸತ್ಯ ಹೊರಬರಲಿದೆ ಎಂದರು.
ಚಿಂಚೋಳಿ ತಾಲೂಕಿನಲ್ಲಿ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಮಾಲೀಕತ್ವದ ಸಿದ್ಧಶ್ರೀ ಎಥೆನಾಲ್ ಕಾರ್ಖಾನೆ ಕಾರ್ಯಾಚರಣೆ ನಡೆಸದಂತೆ ರಾಜ್ಯ ಸರಕಾರ ಇಲ್ಲದ ಪಿತೂರಿಗಳನ್ನು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ,ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಿ, ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ವೆಂಕಟೇಶ್ ಪ್ರಸಾದ್ ಮಾಲೆಪಾಟಿ ಇದ್ದರು.
ಕಾಟಾಚಾರದ ಸಂಪುಟ ಸಭೆ ಬೇಡ
ಇದೇ ಸೆಪ್ಟೆಂಬರ್ 17ರಂದು ರಾಜ್ಯ ಸರಕಾರ ಕಲಬುರಗಿ ನಗರದಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿರುವುದು ಸ್ವಾಗತಾರ್ಹವಾದರೂ, ಇದೊಂದು ಕಾಟಾಚಾರದ ಸಂಪುಟ ಸಭೆ ಆಗಬಾರದು ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಸಲಹೆ ನೀಡಿದರು.ಸಂಪುಟ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ತೇಲ್ಕೂರ್ ತಾಕೀತು ಮಾಡಿದರು.