ಹಿಂದುಳಿದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕು:ಸಚಿವ ಈಶ್ವರ ಖಂಡ್ರೆ
ಬೀದರ, ಸೆ.10: ಹಿಂದುಳಿದ ಬಡ ಮಕ್ಕಳಿಗೆ ವಿಶೇಷ ನಿಗಾವಹಿಸಿ ಗುಣಾತ್ಮಕ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರು ಹಾಗೂ ಪಾಲಕರ ಜೊತೆಗೆ ಸಾರ್ವಜನಿಕ ಸಹಭಾಗಿತ್ವ ಅಗತ್ಯವಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.
ಅವರು ಸೋಮವಾರ ಬೀದರ ತಾಲ್ಲೂಕಿನ ಕಮಠಾಣಾ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೀದರ ವತಿಯಿಂದ 1 ಕೋಟಿ 30 ಲಕ್ಷ ರೂ. ವೆಚ್ಚದಲ್ಲಿ ಪರಿಶಿಷ್ಟ ಪಂಗಡದ ಮೆಟ್ರಿಕ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಶಾಲೆಗಳಲ್ಲಿ ಫೀಟೋಪಕರಣ, ಪಾಠೋಪಕರಣ, ಆಟದ ಮೈದಾನ, ಅಡುಗೆ ಕೋಣೆ, ಕುಡಿಯುವ ನೀರು, ಶೌಚಾಲಯ ಮೊದಲಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಈ ವರ್ಷ 125 ಕೋಟಿ ಕಾಯ್ದಿರಿಸಲಾಗಿದೆ. ಮಕ್ಕಳಿಗೆ ವಿಶೇಷವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಇಂಗ್ಲೀಷ್, ಸಮಾಜ ವಿಜ್ಞಾನ ಮೊದಲಾದ ವಿಷಯಗಳ ಬೋಧನೆ ಮಾಡಿ ಪ್ರಾಥಮಿಕ ಹಂತದ ಶಿಕ್ಷಣ ನೀಡಿ ಪ್ರಗತಿ ಆಗಬೇಕಾಗಿದೆ ಎಂದರು.
ಬೀದರ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಪ್ರಾಮುಖ್ಯತೆ ನೀಡಿ ಸಿಸಿ ಟಿವಿ ಕ್ಯಾಮರಾ ಮತ್ತು ಕಂಪೌಂಡ ಗೋಡೆಯನ್ನು ನಿರ್ಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗೀರಿಶ ಬದೋಲೆ, ಜಿಲ್ಲಾ ಗ್ಯಾರಂಟಿ ಅನುದಾನ ಪ್ರಾಧಿಕಾರದ ಅಧ್ಯಕ್ಷರಾದ ಅಮೃತರಾವ ಚೀಮಕೊಡೆ, ಗ್ರಾಮ ಪಂಚಾಯತ ಅಧ್ಯಕ್ಷರಾದ ರವಿಕುಮಾರ ನಡುವಿನ ದೊಡ್ಡಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ಬೀದರನ ಶಿವಮಾನಪ್ಪ ಹಾಗೂ ಗ್ರಾಮದ ಮುಖಂಡರಾದ ಕುಶಾಲರಾವ ಯೋಬಾ, ಮಾಣಿಕರಾವ ಪಾಟೀಲ, ಶಿವಕುಮಾರ ಸೇರಿದಂತೆ ಸಾರ್ವಜನಿಕರು, ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.