ಸಮಸ್ಯೆಗೆ ಸಾವು ಪರಿಹಾರವಲ್ಲ : ತಂಗಾ
ಕಲಬುರಗಿ : ಸೆ.10: ಸಾಲ, ವೈಯಕ್ತಿಕ ಕಾರಣಗಳು, ಪ್ರೇಮ ವೈಫಲ್ಯ, ಪರೀಕ್ಷೆಗಳಲ್ಲಿ ಅನುತ್ತೀರ್ಣ, ಕೌಟುಂಬಿಕ ಕಲಹ, ಖಿನ್ನತೆ ಸೇರಿದಂತೆ ಮತ್ತಿತರ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆ ಆತ್ಮಹತ್ಯೆ ಜರುಗುತ್ತಿವೆ. ಸಮಸ್ಯೆಗೆ ಸಾವು ಪರಿಹಾರವಲ್ಲ ಎಂದು ಜೇವರ್ಗಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಂವಾರಾಯ ತಂಗಾ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ” ಯನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯರಾದ ರವೀಂದ್ರಕುಮಾರ ಸಿ. ಬಟಗೇರಿ ಮಾತನಾಡಿ, ವಿಶೇಷವಾಗಿ ಮಹಿಳೆಯರು, ರೈತರು ಮತ್ತು ವಿದ್ಯಾರ್ಥಿ ಸಮೂಹ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಜೀವನದಲ್ಲಿ ಬರುವ ಯಾವುದೇ ಸಮಸ್ಯೆಯನ್ನು ಧೈರ್ಯದಿಂದ ಎದುರಿಸಬೇಕು. ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು.
ಆಪ್ತ ಸಮಾಲೋಚನೆ, ಸತ್ಸಂಗ, ಧನಾತ್ಮಕ ಚಿಂತನೆ, ಯೋಗ, ಧ್ಯಾನ ಮಾಡಬೇಕು. ಇರುವುದರಲ್ಲಿಯೇ ತೃಪ್ತಿಯಿಂದ ಇರುವುದು ಕಲಿಯಬೇಕು ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಸಮಾಜಶಾಸ್ತ್ರ ಉಪನ್ಯಾಸಕರಾದ ಕೀರ್ತಿ ಬುಜುರಕೆ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.