ಆಡಳಿತದ ದಿವ್ಯ ನಿರ್ಲಕ್ಷ್ಯ : ರಸ್ತೆಯ ಗುಂಡಿಗಳಿಗೆ ಏಕಾಂಗಿಯಾಗಿ ಮಣ್ಣು ಹಾಕಿ ಮುಚ್ಚುತ್ತಿರುವ ಯುವಕ!
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಸೆ. 10: ರಸ್ತೆಯಲ್ಲಿ ಬಿದ್ದ ಗುಂಡಿ – ಗೊಟರು ಮುಚ್ಚಲು ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ತಳೆದ ಆಡಳಿತದ ಕ್ರಮದಿಂದ ಬೇಸತ್ತ ಯುವಕನೋರ್ವ, ಏಕಾಂಗಿಯಾಗಿ ಗುಂಡಿ-ಗೊಟರುಗಳಿಗೆ ಮಣ್ಣು ಹಾಕಿ ಮುಚ್ಚುವ ಮೂಲಕ ಆಡಳಿತದ ಕಣ್ತೆರೆಸುವ ಕಾರ್ಯ ನಡೆಸುತ್ತಿದ್ದಾರೆ!ಶಿವಮೊಗ್ಗ ನಗರದ ಹೊರವಲಯ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ರೀ ಬಡಾವಣೆ ನಿವಾಸಿಯಾದ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಗುರುಚರಣ್, ಏಕಾಂಗಿಯಾಗಿ ರಸ್ತೆಯ ಗುಂಡಿ – ಗೊಟರುಗಳಿಗೆ ಮಣ್ಣು ಹಾಕಿ ಮುಚ್ಚುತ್ತಿರುವ ಯುವಕನಾಗಿದ್ದಾನೆ. ಕಳೆದ ಹಲವು ದಿನಗಳಿಂದ ರಸ್ತೆ ಅವ್ಯವಸ್ಥೆ ಸರಿಪಡಿಸುವ ಕಾರ್ಯ ನಡೆಸುತ್ತಿದ್ದಾರೆ. ಅಬ್ಬಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ.ಹೆಚ್.ಬಿ. ಪ್ರೆಸ್ ಕಾಲೋನಿ, ಮಹಾಲಕ್ಷ್ಮೀ, ಶ್ರೀ ಬಡಾವಣೆ ಹಾಗೂ ಸುತ್ತಮುತ್ತಲಿನ ತೋಟ-ಗದ್ದೆಗಳಿಗೆ ಸುಮಾರು 1 ಕಿ.ಮೀ. ಉದ್ದವಿರುವ  60 ಅಡಿ ಅಗಲದ ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆಯು ಪ್ರಮುಖ ಸಂಪರ್ಕ ಕೊಂಡಿಯಾಗಿದೆ.ಭಾರೀ ಮಳೆ, ಕೆರೆ ನೀರು ನುಗ್ಗುವುದು ಸೇರಿದಂತೆ ಭಾರೀ ಸರಕು ಸಾಗಾಣೆ ಲಾರಿಗಳ ಸಂಚಾರದಿಂದ, ಸದರಿ ರಸ್ತೆಯು ಗುಂಡಿ – ಗೊಟರು ಬಿದ್ದಿದೆ.  ಜನ – ವಾಹನ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ. ಕಳೆದ ಹಲವು ವರ್ಷಗಳಿಂದ ಇದೇ ದುಃಸ್ಥಿತಿಯಿದೆ. ಕಳೆದ ವರ್ಷ ಕರ್ನಾಟಕ ನೀರಾವರಿ ನಿಗಮದ ಅನುದಾನದಲ್ಲಿ, ಸದರಿ ರಸ್ತೆಯ ಅಲ್ಪ ಭಾಗಕ್ಕೆ ಡಾಂಬರೀಕರಣ ನಡೆಸಲಾಗಿತ್ತು.ಆದರೆ ಉಳಿದ ಭಾಗದ ರಸ್ತೆ ಅವ್ಯವಸ್ಥೆ ಹಾಗೆಯೇ ಇದೆ. ರಸ್ತೆಯ ಉಳಿದ ಭಾಗಕ್ಕೂ ಡಾಂಬರೀಕರಣ ನಡೆಸುವಂತೆ ಈಗಾಗಲೇ ಕರ್ನಾಟಕ ನೀರಾವರಿ ನಿಗಮ, ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತ ಸೇರಿದಂತೆ ತಾಲೂಕು, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗಕ್ಕೆ ಮನವಿ ಮಾಡಲಾಗಿದೆ.ಆದರೆ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಪ್ರಸ್ತುತ ಬೀಳುತ್ತಿರುವ ಭಾರೀ ಮಳೆಗೆ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿವೆ. ಸಂಚಾರ ದುಸ್ತರವಾಗಿ ಪರಿಣಮಿಸಿದೆ’ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ. ‘ಬಿಡುವಿನ ವೇಳೆ ರಸ್ತೆಯಲ್ಲಿ ಬಿದ್ದ ಗುಂಡಿ-ಗೊಟರುಗಳಿಗೆ ಮಣ್ಣು ಹಾಕಿ ಮುಚ್ಚುವ ಕಾರ್ಯ ನಡೆಸುತ್ತಿದ್ದೆನೆ. ಸ್ಥಳೀಯ ನಿವಾಸಿ ಕೃಷ್ಣಪ್ಪ ಎಂಬುವರು ಎರಡು ಟ್ರ್ಯಾಕ್ಟರ್ ನಷ್ಟು ಮಣ್ಣು ಕೊಡಿಸಿದ್ದಾರೆ. ಇನ್ನಾದರೂ ಆಡಳಿತ ಎಚ್ಚೆತ್ತುಕೊಳ್ಳಬೇಕು. ರಸ್ತೆ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು’ ಎಂದು ಗುರುಚರಣ್ ಅವರು ಆಗ್ರಹಿಸುತ್ತಾರೆ.