ಚಾ.ನಗರ ಸಭೆ ಬಿಜೆಪಿ ತೆಕ್ಕೆಗೆ ಕೈಗೆ ಮುಖಭಂಗ
(ಸಂಜೆವಾಣಿ ಪ್ರತಿನಿಧಿಯಿಂದ)
ಚಾಮರಾಜನಗರ,ಸೆ.೧೦- ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿದೆ. ೩೧ ಸದಸ್ಯ ಬಲದ ಚಾಮರಾಜನಗರ ನಗರಸಭೆಯಲ್ಲಿ ಕಾಂಗ್ರೆಸ್‌ನ ಮೂವರು ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಗೈರುಹಾಜರಾದ್ದರಿಂದ ಬಿಜೆಪಿ ಮತ್ತೆ ೨ನೇ ಬಾರಿಗೆ ಅಧಿಕಾರಿದ ಗದ್ದುಗೆ ಹಿಡಿದಿದೆ.
ಬಿಜೆಪಿಯ ಸುರೇಶ್‌ನಾಯಕ್ ಅಧ್ಯಕ್ಷರಾಗಿ, ಮಮತಾ ಬಾಲಸುಬ್ರಹ್ಮಣ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿ ನಾಯಕರು ಮಾಡಿದ ಆಪರೇಷನ್‌ಗೆ ಪ್ರತಿಯಾಗಿ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಮಾಡಿದ ರಿವರ್ಸ್ ಆಪರೇಷನ್ ಫಲ ನೀಡಲಿಲ್ಲ. ಹಾಗಾಗಿ, ಬಿಜೆಪಿ ನಗರಸಭೆಯ ಅಧಿಕಾರ ಹಿಡಿದಿದೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯಿಂದ ಸುರೇಶ್‌ನಾಯಕ್ ಅಧ್ಯಕ್ಷ ಸ್ಥಾನಕ್ಕೆ ಮಮತಾ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರೆ ಕಾಂಗ್ರೆಸ್‌ನಿಂದ ಆರ್.ಎಂ ರಾಜಪ್ಪ ಅಧ್ಯಕ್ಷ ಸ್ಥಾನಕ್ಕೆ ಎಸ್‌ಡಿಪಿಐ ಅಬ್ರಹಾರ್ ಅಹ್ಮದ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಬಿಜೆಪಿಯ ಸುರೇಶ್ ಹಾಗೂ ಮಮತಾ ೧೫ ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ರಾಜಪ್ಪ ಹಾಗೂ ಎಸ್‌ಡಿಪಿಐನ ಅಬ್ರಹಾರ್ ೧೪ ಮತಗಳನ್ನು ಪಡೆದರು.