ಮಕ್ಕಳಿಗೆ ಒಳ್ಳೆಯ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಬೇಕು
ಕೋಲಾರ,ಸೆ,೧೦- ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ವೃದ್ಧಿಗೆ ಆರ್ಥಿಕ ಹೊರೆಯನ್ನು ಲೆಕ್ಕಿಸದೆ ಒಳ್ಳೆಯ ಶಾಲಾ ಕಾಲೇಜುಗಳಿಗೆ ಸೇರಿಸುತ್ತಾರೆ, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಬದ್ಧತೆಯಿಂದ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಿಸಿದಾಗ ಮಾತ್ರ ಮಕ್ಕಳ ಪ್ರಗತಿ ಸಾಧ್ಯ ಎಂದು ಪತ್ರಕರ್ತ, ಮನ್ವಂತರ ಪ್ರಕಾಶನದ ಅಧ್ಯಕ್ಷ ಪಾ.ಶ್ರೀ.ಅನಂತರಾಮ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಡೇರಹಳ್ಳಿ ಯಲ್ಲಿರುವ ಆರ್ಕಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಶಾಲೆಗೆ ಪುಸ್ತಕಗಳನ್ನು ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆ ಸುಧಾರಿಸಲು ಸರ್ಕಾರವನ್ನು ನಂಬಿ ಕುಳಿತರೆ ಸಾಲದು ಆಡಳಿತ ಮಂಡಳಿ ಹಾಗೂ ಶಿಕ್ಷಕರು ವಿಶೇಷ ಆಸಕ್ತಿ ವಹಿಸಿ ಗುಣಾತ್ಮಕ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಿ ಜೀವನ ಸಾಗಿಸುವ ಹಾಗೂ ದೇಶಕ್ಕೆ ಉಪಯುಕ್ತ ಪ್ರಜೆ ಆಗಲು ಮಾರ್ಗದರ್ಶನ ನೀಡಲು ಹೇಳಿದರು.
ಶಿಕ್ಷಕರ ವೃತ್ತಿ ಸುಲಭವಲ್ಲ, ತರಗತಿಗೆ ಬರುವ ಮುನ್ನ ಪಠ್ಯ ಬೋಧನೆಗೆ ಸಂಬಂಧಿಸಿದಂತೆ ಪ್ರತಿದಿನ ಪುಸ್ತಕ ಓದಿ, ವಿಷಯವನ್ನು ಮನನ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಕಲಿಸಿದರೆ ಕಲಿಕೆ ಸಾರ್ಥಕವಾಗುತ್ತದೆ, ಕಲಿತ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶಾಲೆಯ ಮುಖ್ಯಸ್ಥರಾದ ಡಾ. ವೇಣುಗೋಪಾಲ್ , ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರ ಸಲಹೆ ಅನುಸರಿಸಿ ನಮ್ಮ ಇತಿಮಿತಿಯಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಬದ್ಧ ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲರಾದ ಕೀರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಒಂದು ಶಾಲೆ ಎಂದರೆ ಅದಕ್ಕೆ ಶಿಕ್ಷಕರು ಆಧಾರ ಸ್ತಂಭ ಇದ್ದಂತೆ, ಒತ್ತಡ ನಡುವೆ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ, ಶಿಕ್ಷಕರು ಶಾಂತಿ ಮತ್ತು ಸಹನೆಯಿಂದ ಕೆಲಸ ಮಾಡದಿದ್ದರೆ ಮಕ್ಕಳಿಗೆ ಅನ್ಯಾಯ ಮಾಡಿದಂತೆ ಆಗುವುದರಿಂದ ಶಿಕ್ಷಕರು ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ ಮತ್ತು ಒಳ್ಳೆಯ ಪುಸ್ತಕ ಓದುವುದರಿಂದ ಸಕಾರಾತ್ಮಕ ಚಿಂತನೆಗಳು ಮೂಡಿ ಅದರಿಂದ ಗುಣಾತ್ಮಕ ಪ್ರತಿಫಲ ಕಾಣಬಹುದೆಂದು ನುಡಿದರು.
ಶಾಲೆಯ ಸಂಪನ್ಮೂಲ ವ್ಯಕ್ತಿ ಸಂತೋಷ್ ಕುಮಾರ್ ನಮ್ಮ ಶಾಲೆ ಸುಂದರವಾಗಿದೆ, ಒಳ್ಳೆಯ ಶಿಕ್ಷಕರು ಇದ್ದಾರೆ, ಅದೇ ರೀತಿ ಮಕ್ಕಳನ್ನು ಗುಣವಂತರಾಗಿಸಲು ಶಿಕ್ಷಕರು ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಶಾಲೆಯ ಆಡಳಿತಾಧಿಕಾರಿ ಜೆ.ಎನ್.ರಾಮಕೃಷ್ಣ ನಿರೂಪಿಸಿ, ಏನಾಗಲಿ ಮುಂದೆ ಸಾಗು ನೀ , ಬಯಸಿದ್ದಲ್ಲಾ ಸಿಗದು ಬಾಳಲಿ” ಎಂಬ ಸಿನಿಮಾ ಹಾಡನ್ನು ಹಾಡಿ ಮನರಂಜಿಸಿದರು.