ರಾಷ್ಟ್ರಧ್ವಜ ಗೀತೆಗೆ ನೂರು ವರ್ಷದ ಸಂಭ್ರಮ-ಗಣೇಶ್
ಕೋಲಾರ,ಸೆ,೧೦- ಭಾರತದ ರಾಷ್ಟ್ರಧ್ವಜ ಗೀತೆಯಾದ ಝಂಡಾ ಊಂಚಾ ರಹೇ ಹಮಾರ ಗೀತೆಯು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಗೀತೆ ರಚನೆಕಾರ ಶಾಮಲಾಲ್ ಗುಪ್ತಾ ರನ್ನು ದೇಶ ಸ್ಮರಿಸಬೇಕಾಗಿದೆ ಎಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.
ನಗರದ ಕಾರಂಜಿಕಟ್ಟೆ ಬಡಾವಣೆಯ ಶ್ರೀಧರ್ಮರಾಯಸ್ವಾಮಿ ದೇವಾಲಯ ಪಕ್ಕದ ಎಇಎಸ್ ಪಬ್ಲಿಕ್ ಶಾಲೆಯಲ್ಲಿ ಭಾರತ ಸೇವಾದಳವತಿಯಿಂದ ಆಯೋಜಿಸಿದ್ದ ಶಾಮಲಾಲ್ ಗುಪ್ತಾರ ೧೨೮ ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮ ಚುರುಕುಗೊಳ್ಳುತ್ತಿದ್ದ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ತೊಡಗಿ ಕೊಂಡಿದ್ದ ಕವಿ ಶಾಮಲಾಲ್‌ಗುಪ್ತಾ ಬರೆದಿದ್ದ ಝಂಡಾ ಊಂಚಾ ರಹೇ ಹಮಾರ ಗೀತೆಯನ್ನು ರಚಿಸಿದ್ದರು. ಈ ಗೀತೆಯನ್ನು ಮೊದಲ ಬಾರಿಗೆ ೧೩ ಏಪ್ರಿಲ್ ೧೯೨೪ ರಂದು ಜಲಿಯನ್‌ವಾಲಾಬಾಗ್ ನಲ್ಲಿ ಹತ್ಯೆಗೀಡಾದವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಾಡಲಾಯಿತು. ಇದೇ ಕಾರ್ಯ ಕ್ರಮದ ಮುಖ್ಯ ಅತಿಥಿಯಾಗಿದ್ದ ಜವಹರಲಾಲ್ ನೆಹರು ಹಾಡನ್ನು ಮೆಚ್ಚಿಕೊಂಡಿದ್ದರು. ಆನಂತರ ಈ ಗೀತೆಯನ್ನು ಧ್ವಜಗೀತೆಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಯಿತು ಎಂದು ವಿವರಿಸಿದರು.
ಆನಂತರ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ರಾಷ್ಟ್ರಧ್ವಜ ಆರೋಹಣ ಸಂದರ್ಭದಲ್ಲಿ ಕಡ್ಡಾಯವಾಗಿ ವಂದೇ ಮಾತರಂ, ಝಂಚಾ ಊಂಚಾ ರಹೇ ಹಮಾರ ಮತ್ತು ಜನಗಣ ಮನ ಗೀತೆಗಳನ್ನು ಹಾಡಲಾಗುತ್ತಿದೆ ಎಂದು ತಿಳಿಸಿದರು.ತಮ್ಮ ಗೀತೆಯಿಂದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹುರುಪು ತುಂಬಿದ ಶಾಮಲಾಲ್ ಗುಪ್ತಾರಿಗೆ ಭಾರತ ಸರಕಾರವು ೧೯೬೯ ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ೧೯೭೭ ರಲ್ಲಿ ಅವರ ಭಾವಚಿತ್ರವುಳ್ಳ ಅಂಚೆ ಚೀಟಿ ಹೊರತಂದು ಗೌರವಿಸಿತ್ತು ಎಂದು ಹೇಳಿದರು.
ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಆರ್.ಶ್ರೀನಿವಾಸನ್ ಮಾತನಾಡಿ, ಸೇವಾದಳ ಚಟುವಟಿಕೆಗಳನ್ನು ನಿರಂತರವಾಗಿ ಆಚರಿಸುವ ಮೂಲಕ ಸೇವಾದಳ ಶಾಲೆಯಾಗಿಯೇ ಗುರುತಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತವಡಿಸಿದರು.
ಅಧ್ಯಕ್ಷತೆವಹಿಸಿದ್ದ ಎಇಎಸ್ ಪಬ್ಲಿಕ್ ಶಾಲೆಯ ಮುಖ್ಯಸ್ಥ ಫಲ್ಗುಣ ಮಾತನಾಡಿ, ಭಾರತ ಸೇವಾದಳದ ಮಹತ್ವವನ್ನು ಅರಿತು ಶಾಲೆಯು ಸೇವಾದಳ ಚಟುವಟಿಕೆಗಳಿಗೆ ಸದಾ ತೆರೆದಿರುತ್ತದೆ ಎಂದರು.
ವೇದಿಕೆಯಲ್ಲಿ ಸೇವಾದಳ ಪದಾಧಿಕಾರಿಗಳಾದ ಕೆ.ಜಯದೇವ್, ಲಕ್ಷ್ಮಣ್, ಚಂದ್ರು, ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಮತ್ತು ಶಾಲೆಯ ಶಿಕ್ಷಕರು ಮಕ್ಕಳು ಭಾಗವಹಿಸಿದ್ದರು.