ಜನಸ್ನೇಹಿ ಕಾರ್ಯಕ್ಕೆ ಸಹಕರಿಸಿ; ಸಂಜಯ್ ಮನವಿ
ಕೋಲಾರ,ಸೆ,೧೦- ಭೂದಾಖಲೆಗಳ ಇಲಾಖೆಯನ್ನು ಜನಸ್ನೇಹಿಯಾಗಿಸೋಣ, ರೈತರು ತಮ್ಮ ಭೂ ದಾಖಲೆ,ಅಳತೆಗಾಗಿ ಅಲೆದಾಡುವುದನ್ನು ತಪ್ಪಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರ ನೀಡಿ ಎಂದು ಕೋಲಾರ ಜಿಲ್ಲಾ ಭೂದಾಖಲೆಗಳ ಇಲಾಖೆ ನೂತನ ಉಪನಿರ್ದೇಶಕ ಬಿ.ಕೆ.ಸಂಜಯ್ ಮನವಿ ಮಾಡಿದರು.
ಕೋಲಾರದಲ್ಲಿ ಈವರೆಗೂ ಉಪನಿರ್ದೇಶಕರಾಗಿದ್ದ ಭಾಗ್ಯಮ್ಮ ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಆ ಸ್ಥಾನಕ್ಕೆ ನೂತನ ಉಪನಿರ್ದೇಶಕರಾಗಿ ಚಿಕ್ಕಬಳ್ಳಾಪುರದಿಂದ ವರ್ಗಾವಣೆಗೊಂಡು ಸೋಮವಾರ ಕೋಲಾರದ ತಮ್ಮ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಅವರನ್ನು ರಾಜ್ಯ ಸರ್ವೇ ಇಲಾಖೆ ನೌಕರರ ಸಂಘದ ಗೌರವಾಧ್ಯಕ್ಷ ಹಾಗೂ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಹಾಗೂ ಸಿಬ್ಬಂದಿ ಸ್ವಾಗತಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಕಂದಾಯ ಇಲಾಖೆಯಲ್ಲಿ ಭೂದಾಖಲೆಗಳ ಇಲಾಖೆಗೆ ಹೆಚ್ಚಿನ ಮಹತ್ವವಿದೆ, ರೈತರಿಗೆ ಅಗತ್ಯವಾದ ಭೂ ಅಳತೆ ಕಾರ್ಯವನ್ನು ನಿರ್ವಯಿಸುವ ನಾವು ಅಗತ್ಯ ದಾಖಲೆ ನೀಡಬೇಕಾಗುತ್ತದೆ, ಇಂತಹ ಮಹತ್ಕಾರ್ಯವನ್ನು ವಹಿಸಿಕೊಂಡಿದ್ದು, ಇಲ್ಲಿ ಹೆಚ್ಚಿನ ಬದ್ದತೆ ಕೆಲಸ ಮಾಡಲು ಇಚ್ಚಾಶಕ್ತಿಯ ಅಗತ್ಯವಿದೆ ಎಂದರು.
ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಕಾಡುತ್ತಿರುವುದು ನಿಜ ಆದರೆ ಇರುವ ಸಿಬ್ಬಂದಿಯಿಂದಲೇ ಸಾಧ್ಯವಾದಷ್ಟು ಉತ್ತಮ ಕೆಲಸ ನಿರ್ವಹಣೆಗೆ ಕ್ರಮವಹಿಸೋಣ, ಸಾರ್ವಜನಿಕರ, ರೈತರ ಮನವಿಗೆ ಸ್ಪಂದಿಸಿ ಕೆಲಸ ಮಾಡೋಣ ಎಂದು ಕೋರಿದರು.
ಕೋಲಾರ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆಯಾಗಿದೆ, ಈ ಜಿಲ್ಲೆಯಲ್ಲಿ ಕೆರೆ ಒತ್ತುವರಿ, ಸರ್ಕಾರಿ ಜಮೀನುಗಳ ಒತ್ತುವರಿ ಆರೋಪಗಳು ಇದೆ ಇಲ್ಲಿ ನಾವು ಅತಿ ಎಚ್ಚರಿಕೆಯಿಂದ ಕೆಲಸ ಮಾಡಿ ಇಲಾಖೆಯನ್ನು ಜನಸ್ನೇಹಿಯಾಗಿಸೋಣ ಎಂದರು.
ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ, ಸರ್ವೇ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಇರುವ ಸಿಬ್ಬಂದಿಯೇ ಅತಿ ಹೆಚ್ಚಿನ ಒತ್ತಡದ ನಡುವೆಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ, ಇಲಾಖೆಯನ್ನು ಜನಸ್ನೇಹಿಯಾಗಿಸುವ ತಮ್ಮ ಪ್ರಯತ್ನಕ್ಕೆ ನಾವೆಲ್ಲಾ ಸಹಕಾರ ನೀಡುವುದಾಗಿ ತಿಳಿಸಿ ನೂತನ ಡಿಡಿಯವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಸರ್ವೇ ಇಲಾಖೆಯ ಜಯಲಕ್ಷ್ಮಿ, ಸುಭಾಷ್, ನಮ್ರತಾ, ಸಂಧ್ಯಾ, ಮಂಜುಳಾ, ಸಹಾಯಕ ನಿರ್ದೇಶಕರ ಕಚೇರಿಯ ಶಿವಕಾಂತ್,ವಸಂತ್, ನಾಗೇಂದ್ರಬಾಬು, ಶಿವಾನಂದ್, ಸಂದೀಪ್, ತಿಮ್ಮರಾಜು, ಸುನೀಲ್, ರಾಮರೆಡ್ಡಿ ಮತ್ತಿತರರಿದ್ದರು.