ಸಾರ್ವಜನಿಕ ಗಣಪತಿ ಮೂರ್ತಿಗಳ ಭವ್ಯ ಮೆರವಣಿಗೆ
ಕೋಲಾರ, ಸೆ.೧೦- ನಗರದಲ್ಲಿ ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿಯಿಂದ ನಡೆದ ಸಾರ್ವಜನಿಕ ಗಣಪತಿ ಮೂರ್ತಿಗಳ ಭವ್ಯ ಮೆರವಣಿಗೆ ನಗರದಲ್ಲಿ ಸಾಗಿ ಬಂದಿದ್ದು, ವಿವಿಧ ಬಡಾವಣೆಗಳ ೫೦ಕ್ಕೂ ಹೆಚ್ಚು ವಿನಾಯಕನ ಮೂರ್ತಿಗಳು ಭಾಗವಹಿಸಿದ್ದು, ಇಡೀ ಎಂ.ಜಿ.ರಸ್ತೆ ಕೇಸರಿಮಯವಾಗಿತ್ತು.
ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿಯ ೨೨ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಗಾಂಧಿವನದಲ್ಲಿ ನಿರ್ಮಿಸಿದ್ದ ಬೃಹತ್ ವೇದಿಕೆಯಲ್ಲಿ ನಟ ಯುವರಾಜ್ ಕುಮಾರ್ ಹಾಗೂ ಮಾಜಿ ಸಂಸದ ಎಸ್.ಮುನಿಸ್ವಾಮಿ ಚಾಲನೆ ನೀಡುತ್ತಿದ್ದಂತೆ ಮೆರವಣಿಗೆ ಹತ್ತಾರು ಕಲಾತಂಡಗಳು, ತಮಟೆ ಮತ್ತಿತರ ಜಾನಪದ ಕಲಾವಿದರ ನೇತೃತ್ವದಲ್ಲಿ ಸಾಗಿ ಬಂತು.
ಎಂ.ಜಿ.ರಸ್ತೆಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರಾದ ಬಜರಂಗದಳ ಬಾಲಾಜಿ, ಅಪ್ಪಿ, ಡಾ.ಶಿವಣ್ಣ, ಸತ್ಯನಾರಾಯಣ ಜ್ಯುವೆಲರ್‍ಸ್ ವೆಂಕಟೇಶ್, ಅಪ್ಪಿನಾರಾಯಣಸ್ವಾಮಿ ಮತ್ತಿತರರು ಕೇಸರಿ ಧ್ವಜದೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು.
ಸಾಂಸ್ಕೃತಿಕ ತಂಡಗಳ ಮೆರುಗು
ನಾದಸ್ವರ , ಡೋಲು ಮೆರವಣಿಗೆಯೊಂದಿಗೆ ಸಾಗಿದ್ದು, ಗಾರುಡಿಗೊಂಬೆ, ಕೀಲುಕುದುರೆ, ಕೋಲಾಟ, ಡೊಳ್ಳುಕುಣಿತ, ತಮಟೆ ಕಲಾವಿದರು, ಮೆರವಣಿಗೆಯಲ್ಲಿ ಸಾಗಿ ಬಂದಾಗ ೫೦ ಸಾವಿರಕ್ಕೂ ಮೀರಿದ ಜನಸ್ತೋಮ ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಿ ಆನಂದಿಸಿದರು.
ವಿವಿಧ ಬಡಾವಣೆಗಳು ಮತ್ತು ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಪ್ರತಿಷ್ಟಾಪಿಸಿದ ವಿವಿಧ ರೂಪಿ ಗಣಪ ಮೂರ್ತಿಗಳಲ್ಲಿ ಸಾಯಿ ರೂಪಿ ಗಣಪ, ನಾಟ್ಯ ಗಣಪ, ಹನುಮನೊಂದಿಗೆ ನಿಂತ ಗಣಪ, ಶಿವನ ತೊಡೆಯಮೇಲೆ ಗಣಪ, ನಂದಿಯ ಮೇಲೆ ಸವಾರಿ ಮಾಡುತ್ತಿರುವ ಗಣಪ, ಗಣಪ, ವಿಶ್ವರೂಪಿ ಗಣಪ, ಕಾಳಿಂಗ ಮರ್ಧಣ ಗಣಪ ಹೀಗೆ ಹತ್ತಾರು ವಿನ್ಯಾಸದ ಮೂರ್ತಿಗಳು ಮೆರವಣಿಗೆಯಲ್ಲಿ ಸಾಗಿ ಬಂದವು.
ಇಡೀ ಮೆರವಣಿಗೆಗೆ ಭಗವಧ್ವಜ ಗಳನ್ನಿಡಿದ ಯುವಕರು ರಸ್ತೆಯಲ್ಲಿ ಸಾಗಿ ಇಡೀ ಎಂ.ಜಿ.ರಸ್ತೆ ಕೇಸರಿಮಯವಾಗು ವಂತೆ ಮಾಡಿದ್ದರು.
ಎಲ್ಲೆಲ್ಲಿಯೂ ಹಾರಾಡಿದ ಭಗವಧ್ವಜಗಳು, ಜಾತಿ, ಮತಗಳ ಬೇಧವಿಲ್ಲದೇ ಎಲ್ಲಾ ಯುವಜನರನ್ನು ಒಂದೇ ವೇದಿಕೆಗೆ ಸಂಘಟಿಸುವಲ್ಲಿ ತಿಲಕ್ ವಿನಾಯಕ ವಿಸರ್ಜನಾ ಸಮಿತಿ ಯಶಸ್ವಿಯಾಯಿತು.
ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಬಂದಾಗ ಕೆಲವು ಪ್ರದೇಶಗಳಲ್ಲಿ ಮಹಿಳೆಯರು ಪುಷ್ಪವೃಷ್ಟಿ ಸುರಿಸಿ ಸ್ವಾಗತ ಕೋರಿದರು.
ಮೆರವಣಿಗೆಯಲ್ಲಿ ೫೦ಕ್ಕೂ ಹೆಚ್ಚು ವಿವಿಧ ಬಡಾವಣೆ ಹಾಗೂ ಸುತ್ತಮುತ್ತಲ ಗ್ರಾಮಗಳ ಗಣೇಶ ಮೂರ್ತಿಗಳ ಪಲ್ಲಕ್ಕಿಗಳು ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ಇಡೀ ಕಾರ್ಯಕ್ರಮದ ಉಸ್ತುವಾರಿ ಯನ್ನು ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿಯ ಭಜರಂಗದಳದ ಬಾಲಾಜಿ,ಬಾಬು, ಮಂಜುನಾಥ್ ಮತ್ತಿತರರು ವಹಿಸಿದ್ದು, ವಿವಿಧ ಸಂಘಟನೆಗಳ ಮುಖಂಡರಾದ ಡಿ.ಆರ್.ನಾಗರಾಜ್,ವಿಹಿಂಪದ ವೆಂಕಟೇಶ್, ವಿಶ್ವನಾಥ್, ರವಿ, ಪ್ರಕಾಶ್, ಮಂಜುನಾಥ್, ಸಂಜಯ್, ಶ್ರೀನಿವಾಸ್, ನರೇಶ್, ಹರೀಶ್, ಕನಕೇಶ್ ನಾಗರಾಜ್, ಗಿರೀಶ್, ಮುರಳಿ ಮತ್ತಿತರ ನೂರಾರು ಯುವಕರು ವಹಿಸಿದ್ದರು.