ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗಲಿ
ಸಂಜೆವಾಣಿ ನ್ಯೂಸ್
ಮೈಸೂರು:ಸೆ.10:- ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳಂತೆ ಉತ್ತಮ ಸೌಲಭ್ಯ, ಗುಣಮಟ್ಟದ ಸಿಗಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಪಾದಿಸಿದರು.
ಕಲಿಸು ಫೌಂಡೇಷನ್ ವತಿಯಿಂದ ಕುಂಬಾರ ಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ 100ನೇ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಶಿಕ್ಷಣ ವ್ಯವಸ್ಥೆ ಸಾಕಷ್ಟು ಬದಲಾಗಿದೆ. ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕಾದ ಅಗತ್ಯತೆ ಇದೆ. ಶಿಕ್ಷಣದ ಮಹತ್ವ ಅರಿತಿರುವ ಕಲಿಸು ಫೌಂಡೇಷನ್ ನಿರ್ಮಿಸಿರುವ 100ನೇ ಗ್ರಂಥಾಲಯ ಇದಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಂವಾದ: ಇದೇ ವೇಳೆ ಯದುವೀರ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿನಿಯೊಬ್ಬಳ್ಳ ನಿಮ್ಮ ಬಾಲ್ಯ ಜೀವನ ಹೇಗಿತ್ತು? ನಿಮ್ಮ ನೆಚ್ಚಿನ ಶಿಕ್ಷಕರು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಯದುವೀರ್, ನಾನು ಓದಿದ್ದು, ಬೆಂಗಳೂರಿನ ವಿದ್ಯಾನಿಕೇತನ ಶಾಲೆಯಲ್ಲಿ. ನನ್ನ ಬಾಲ್ಯ ನಿಮ್ಮಂತೆಯೇ ಇತ್ತು. ಸರ್ಕಾರಿ ಬಸ್‍ನಲ್ಲಿ ಶಾಲೆಗೆ ಹೋಗುತ್ತಿದ್ದೆ. ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸುತ್ತಿದ್ದೆ. ಪಿಟಿ ತರಗತಿ ಎಂದರೆ ಅಚ್ಚುಮೆಚ್ಚು. ನನಗೆ ಬೋಧಿಸಿದ ಎಲ್ಲರೂ ಉತ್ತಮ ಶಿಕ್ಷಕರಾಗಿದ್ದರು. ದೈಹಿಕ ಶಿಕ್ಷಕರು ನನ್ನ ಶಿಕ್ಷಕರು ಎಂದರು.
ಗುಣಮಟ್ಟದ ಶಿಕ್ಷಣದ ಕುರಿತು ನಿಮ್ಮ ಅಭಿಪ್ರಾಯ ಏನು ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಖಾಸಗಿ ಶಾಲೆಯಂತೆಯೇ ಉತ್ತಮ ಸೌಲಭ್ಯ, ಕಲಿಕೆಯ ವಾತಾವರಣ, ಉನ್ನತ ತಂತ್ರಜ್ಞಾನ ಸಕಾರಿ ಶಾಲಾ ಮಕ್ಕಳಿಗೂ ಸಿಗಬೇಕು. ಸಮಗ್ರ ಶಿಕ್ಷಣದ ಜತೆಗೆ ಸಮಾಜದಲ್ಲಿ ಬೆಳೆಯಲು ಕೌಶಲ್ಯಯುತ ಶಿಕ್ಷಣ ಸಿಗಬೇಕು. ಕೌಶಲ್ಯಾಭಿವೃದ್ಧಿಯಾದರೆ ದೇಶವೂ ಅಭಿವೃದ್ಧಿಯಾಗುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ನಿಮ್ಮ ಕಿವಿಮಾತೇನು ಎಂಬ ಪ್ರಶ್ನೆಗೆ, ಕಿವಿಮಾತು ಕೊಡಲು ನಾನು ಏನೂ ಮಾಡಿಲ್ಲ. ಓದುವ ಸಮಯದಲ್ಲಿ ಓದಿ. ಶ್ರೇಷ್ಠ ಭಾರತಕ್ಕಾಗಿ ಶ್ರಮಿಸಿ. ನಿಮ್ಮ ಆಸಕ್ತಿಗೆ ಅನುಗುಣವಾಗಿ ಗುರಿಸಾಧನೆಯೆಡೆಗೆ ಮುನ್ನಡೆಯಿರಿ ಎಂದರು.
ಸಮಾಜ ಸೇವೆ ಕುರಿತು ನಿಮ್ಮ ಅಭಿಪ್ರಾಯ? ರಾಜಕೀಯ ನೀವು ಬಂದಿದ್ದು ಆಕಸ್ಮಿಕವ ಎಂಬ ಪ್ರಶ್ನೆಗೆ, ಮನೆಯಲ್ಲೇ ಸಮಾಜ ಸೇವೆ ಶುರುವಾಗಬೇಕು. ತಂದೆ ತಾಯಿಗೆ ಸೇವೆ ಮಾಡಿ ನಂತರ ಸಮಾಜದ ಸೇವೆ ಮಾಡಬೇಕು. ನಾನು ಆಕಸ್ಮಿಕವಾಗಿ ಬಂದಿಲ್ಲ. ರಾಜಕೀಯಕ್ಕೆ ಬಂದು, ಪದವಿ ಪಡೆದು ಸೇವೆ ಮಾಡಬೇಕೆಂದಿಲ್ಲ. ಸಮಾಜದ ಪ್ರತಿಯೊಬ್ಬರೂ ಸೇವೆ ಮಾಡಬಹುದು ಎಂದರು
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು, ಡಿಡಿಪಿಐ ಜವರೇಗೌಡ, ಬಿಇಒ ಎಸ್.ರೇವಣ್ಣ, ಕಲಿಸು ಫೌಂಡೇಷನ್ ಸಿಇಒ ಎಂ.ಎಂ.ನಿಖಿಲೇಶ್ ಸೇರಿದಂತೆ ಹಲವರು ಇದ್ದರು.