ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು:ಸೆ.10:- ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಟೆರೇಷಿಯನ್ ಕಾಲೇಜು ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡು ಘೋಷಣೆಗಳನ್ನು ಕೂಗಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ಪರಿಶಿಷ್ಟರ ಮೀಸಲಾತಿ ಪರಿಶಿಷ್ಟ ಜನಾಂಗದ 101 ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ ಎಂಬ ಆತಂಕ ಹಾಗೂ ಅಸಹನೆಯಿಂದ 30 ದಶಕಗಳಿಂದ ರಾಜ್ಯಾದ್ಯಂತ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಹೋರಾಟದಲ್ಲಿ ಹಲವಾರು ಹೋರಾಟಗಾರರು ಜೀವ, ಜೀವನ ಕಳೆದುಕೊಂಡಿದ್ದಾರೆ. ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಮಾಡಲು ಕರ್ನಾಟಕ, ಆಂಧ್ರ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದ ಹೋರಾಟಗಳ ಹಿನ್ನೆಲೆಯಲ್ಲಿ ಹತ್ತಾರು ರಾಜ್ಯ ಸರಕಾರಗಳು ರಚಿಸಿದ ಆಯೋಗಗಳು ನೀಡಿದ ವರದಿಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್‍ನ 7 ನ್ಯಾಯಾಧೀಶರ ಸಂವಿಧಾನ ಪೀಠ ಆ.1ರಂದು ಐತಿಹಾಸಿಕ ತೀರ್ಪು ನೀಡಿ ಈ ವಿವಾದಕ್ಕೆ ತೆರೆ ಎಳೆದಿದೆ. ಹೀಗಾಗಿ ರಾಜ್ಯ ಸರಕಾರ ಒಳ ಮೀಸಲಾತಿ ಅನುಷ್ಠಾನಗೊಳಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಹಕ್ಕೊತ್ತಾಯಗಳು: ಸುಪ್ರೀಂ ಕೋರ್ಟ್ 7 ನ್ಯಾಯಾಧೀಶರ ತೀರ್ಪಿನಂತೆ ಪರಿಶಿಷ್ಟರ ಮೀಸಲಾತಿಯಲ್ಲಿ ಒಳ ಮೀಸಲಾತಿ ಅನುಷ್ಠಾನ ಮಾಡಬೇಕು. 2023-24 ಮತ್ತು 2024-25ನೇ ಸಾಲಿನಲ್ಲಿ 25,391 ಕೋಟಿ ಎಸ್‍ಸಿಪಿ, ಟಿಎಸ್‍ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಈ ಸಮಾಜದ ಅಭಿವೃದ್ಧಿಗೆ ವಾಪಸ್ ನೀಡಲಿ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸ್ಥಗಿತ ಮಾಡಲಾಗಿದೆ. ಮೆರಿಟ್ ವಿದ್ಯಾರ್ಥಿ ವೇತನ ಮತ್ತು ವಿದೇಶ ವ್ಯಾಸಂಗದ ಪ್ರಬುದ್ಧ ಯೋಜನೆ ರದ್ದು ಮಾಡಿದ್ದು, ಕೂಡಲೇ ಪುನರಾರಂಭಿಸಬೇಕು. ಪರಿಶಿಷ್ಟರ ಮೀಸಲಾತಿ ವರ್ಗೀಕರಣವಾಗುವವರೆಗೂ ಸರ್ಕಾರ ಎಲ್ಲಾ ಸರ್ಕಾರಿ ನೇಮಕಾತಿಗಳನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ, ಜಿಲ್ಲಾದ್ಯಕ್ಷ ಶಂಕರ್, ಮೈಸೂರು ತಾಲೂಕು ಅಧ್ಯಕ್ಷ ಸ್ವಾಮಿ, ತಿ.ನರಸೀಪುರ ತಾಲೂಕು ಅಧ್ಯಕ್ಷ ಬಲ್ಲಯ್ಯ, ರವೀಶ್, ಸಿದ್ದಪ್ಪ, ಗಿರೀಶ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.