ಆಹಾರ ಮೇಳ: ಕಡಿಮೆ ಬಾಡಿಗೆಗೆ ಮನವಿ
ಸಂಜೆವಾಣಿ ನ್ಯೂಸ್
ಮೈಸೂರು:ಸೆ.10:– 2023ರ ದಸರಾ ಮಹೋತ್ಸವದ ಆಹಾರ ಮೇಳದಲ್ಲಿ ಮಾರಾಟಗಾರರಿಗೆ ಮಳಿಗೆ ಬಾಡಿಗೆ ಹೆಚ್ಚಿಸಿದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನಷ್ಟವಾಗಿದ್ದು, ಈ ಬಾರಿಯ ಆಹಾರ ಮೇಳದಲ್ಲಿ ಕಡಿಮೆ ದರದಲ್ಲಿ ಮಳಿಗೆಗಳನ್ನು ಬಾಡಿಗೆಗೆ ನೀಡುವಂತೆ ಮೈಸೂರು ದಸರಾ ಆಹಾರ ಮೇಳ ತಿಂಡಿ ತಿನಿಸುಗಳ ಮಾರಾಟಗಾರರ ಸಂಘ ಮುಖ್ಯಮಂತ್ರಿಗಳು ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಈ ಕುರಿತು ಸಂಘದ ಅಧ್ಯಕ್ಷ ನಾಗರಾಜು.ಎಸ್ ಸಿದ್ದರಾಮನಹುಂಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಾರಿ ರಾಜ್ಯದಲ್ಲಿ ಬರವಿದ್ದ ಹಿನ್ನೆಲೆಯಲ್ಲಿ ಆಹಾರ ಮಳಿಗೆಗಳ ಬಾಡಿಗೆಯನ್ನು ಸಸ್ಯಹಾರಿ 59,000 ರೂ., ಮಾಂಸಾಹಾರಿ ಮಳಿಗೆಗೆ 88,500 ರೂ. ಜಿಎಸ್‍ಟಿ ಸೇರಿದಂತೆ ನಿಗಧಿಪಡಿಸಿದ ಪರಿಣಾಮ ವ್ಯಾಪಾರಸ್ಥರು ನಷ್ಟ ಅನುಭವಿಸಬೇಕಾಯಿತು. ಹೀಗಾಗಿ ಈ ಬಾರಿ ಸಸ್ಯಹಾರಿಗೆ 25,000 ರೂ., ಮಾಂಸಹಾರಿಗೆ 30,000 ರೂ. ಗಳನ್ನು ಜಿಎಸ್‍ಟಿ ರಹಿತವಾಗಿ ನಿಗದಿಪಡಿಸುವಂತೆ ಒತ್ತಾಯಿಸಿದರು.
2019ರಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಅವರು ಕಾರ್ಯಕರ್ತರು ಮತ್ತು ಆಹಾರ ಮೇಳದ ಸಮಿತಿ ಸದಸ್ಯರ ಸಲಹೆ ಮೇರೆಗೆ ಸಸ್ಯಹಾರಿಗೆ 25,000 ರೂ., ಮಾಂಸಹಾರಿಗೆ 30,000 ರೂ. ನಿಗದಿಪಡಿಸಿದರು. ತದನಂತರ 2023ರಲ್ಲಿ ಸಸ್ಯಹಾರಿ 59,000 ರೂ., ಮಾಂಸಹಾರಿ ಮಳಿಗೆಗೆ 88,500 ರೂ., ನಿಗದಿಪಡಿಸಿದರು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ವ್ಯಾಪಾರಸ್ಥರಿಗೆ ದುಪ್ಪಟ್ಟು ನಷ್ಟವಾಯಿತು ಎಂದರು.
40 ಕೋಟಿ ರೂ. ವೆಚ್ಚದಲ್ಲಿ ಅದ್ದೂರಿ ದಸರಾ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ಸಸ್ಯಹಾರಿಗೆ 25,000 ರೂ., ಮಾಂಸಹಾರಿಗೆ 30,000 ರೂ. ಗಳನ್ನು ಜಿಎಸ್‍ಟಿ ರಹಿತವಾಗಿ ನಿಗದಿಪಡಿಸುವ ಮೂಲಕ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಂಡಬೇಕೆಂದು ಮನವಿ ಮಾಡಿದರು.
ಈ ಬಾರಿ 175 ಮಳಿಗೆಗಳನ್ನು ಒಂದೇ ಕಡೆ ನೀಡುವುದಾಗಿ ಜಿಲ್ಲಾಡಳಿತ ತೀರ್ಮಾನಿಸಿದೆ. ಆದರೆ ಒಂದೇ ಕಡೆ 175 ಮಳಿಗೆ ಆದಲ್ಲಿ ವ್ಯಾಪರಸ್ಥರಿಗೆ ಮತ್ತು ಆಹಾರ ಪ್ರಿಯರಿಗೆ ಮತ್ತು ಸಾರ್ವಜನಿಕರಿಗೆ ಪಾರ್ಕಿಂಗ್ ಸಮಸ್ಯೆ ಉದ್ಬವವಾಗಲಿದೆ. ಹೀಗಾಗಿ ಈ ಬಾರಿ ಜಂಬೋ ಸರ್ಕಸ್ ನಡೆಯುತ್ತಿಲ್ಲದಿರುವುದಿರುವುರಿಂದ ಆಹಾರ ಮೇಳವನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ 125 ಮಳಿಗೆಗಳನ್ನು ನಿರ್ಮಾಣ ಮಾಡಲು ಮತ್ತು ಇಟ್ಟಿಗೆಗೂಡಿನ ಕಾರಂಜಿ ಕೆರೆ ಪಕ್ಕದ ಮೈದಾನದಲ್ಲಿ 50 ಮಳಿಗೆಗಳನ್ನು ನಿರ್ಮಿಸಿಕೊಟ್ಟು ವ್ಯಾಪಾರಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲ ಮಾಡಿಕೊಂಡುವಂತೆ ಒತ್ತಾಯಿಸಿದರು.
ಇಟ್ಟಿಗೆಗೂಡಿನ ಕಾರಂಜಿ ಕೆರೆ ಪಕ್ಕದ ಮೈದಾನ ಅರಮನೆಯ ಸುರ್ಪದಿಯಲ್ಲಿ ಇರುವುದರಿಂದ ಈ ಮೈದಾನವನ್ನು ಆಹಾರ ಮೇಳಕ್ಕೆ ಬಳಸಿಕೊಳ್ಳಲು ಅನುಮತಿ ನೀಡುವಂತೆ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಮತ್ತು ಸಂಸದ ಯದುವೀರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಈ ಬಾರಿಯ ದಸರಾ ಮಹೋತ್ಸವ ಅಧಿಕಾರಿಗಳ ದಸರಾ ಆಗಬಾರದು, ಜನ ಸಾಮಾನ್ಯರ ದಸರಾ ಆಗಬೇಕಿರುವುದರಿಂದ ದಸರಾದ ಉಪಸಮಿತಿಗಳನ್ನು ಮುಂಚಿತವಾಗಿ ನೇಮಕ ಮಾಡಿದರೆ ಅಧಿಕಾರಿಗಳು ಸಮಿತಿಯಲ್ಲಿ ಚರ್ಚಿಸಿದರೆ, ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಿದಂತೆ ಆಗುತ್ತದೆ. ಅಧಿಕಾರಿಗಳು ಸಭೆ ನಡೆಸುವಾಗ ಸಂಘದವರಿಗೆ ಆಹ್ವಾನ ನೀಡಿ ಮುಕ್ತವಾಗಿ ಚರ್ಚಿಸಬೇಕು. ಹಾಗೆಯೇ ಮುಖ್ಯವಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಹೊರ ಜಿಲ್ಲೆ, ರಾಜ್ಯಗಳ ವ್ಯಾಪಾಸ್ಥರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರದಾನ ಕಾರ್ಯದರ್ಶಿ ಕಂಸಾಳೆ ರವಿ, ಉಪಾಧ್ಯಕ್ಷೆ ಶಾಂತಮ್ಮ, ಶಿವಸಿದ್ದು, ಬೀರೇಶ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.