ಮೃಗಾಲಯ ನಿರ್ವಹಣೆಯೇ ಸವಾಲು
ಸಂಜೆವಾಣಿ ನ್ಯೂಸ್
ಮೈಸೂರು:ಸೆ.10:- ಮೃಗಾಲಯ ನಿರ್ವಹಣೆ ಸವಾಲಿನಿಂದ ಕೂಡಿದೆ. ವನ್ಯಜೀವಿಗಳ ಪುನರ್‍ವಸತಿ, ಪಾಲನೆ, ಆರೈಕೆಯಲ್ಲಿ ಪಶುವೈದ್ಯರು, ಸಿಬ್ಬಂದಿ ಹಾಗೂ ಅಧಿಕಾರಿಗಳ ನಡುವೆ ಸಮನ್ವಯ ಇರಬೇಕು ಎಂದು ಸಿಕ್ಕಿಂನ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಸೆಂಥಿಲ್ ಕುಮಾರ್ ಹೇಳಿದರು.
ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾರತೀಯ ಅರಣ್ಯ ಸೇವೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಆಯೋಜಿಸಿದ್ದ ಮೃಗಾಲಯ ವ್ಯವಸ್ಥಾಪಕರಿಗಾಗಿ ವನ್ಯಜೀವಿಗಳು ಹಾಗೂ ಮೃಗಾಲಯ ನಿರ್ವಹಣೆ ಕುರಿತ ಐದು ದಿನಗಳ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಮೃಗಾಲಯದಲ್ಲಿ ಅಳಿವಿನಂಚಿನ, ಜಾಗತಿಕವಾಗಿ ಕಡಿಮೆ ಸಂಖ್ಯೆಯಲ್ಲಿರುವ ವನ್ಯಜೀವಿಗಳೂ ಇರುತ್ತವೆ. ಮನೆಯಲ್ಲಿ ಮಗುವನ್ನು ಪಾಲನೆ ಮಾಡಿದಂತೆಯೇ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಆಗ ಮಾತ್ರ ಮಾದರಿ ಮೃಗಾಲಯಗಳು ರೂಪುಗೊಳ್ಳಲು ಸಾಧ್ಯ ಎಂದರು ಅಭಿಪ್ರಾಯಪಟ್ಟರು.
ಮೃಗಾಲಯಗಳ ನಿರ್ವಹಣೆ ಮಾಡಲು ಅನುಭವ ಇರಬೇಕು. ಎಲ್ಲ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವನ್ಯಜೀವಿ ಪಾಲಕರ ಅನುಭವ ಬಳಸಿಕೊಂಡು ಉತ್ತಮ ವಾತಾವರಣವನ್ನು ಮೃಗಾಲಯಗಳಲ್ಲಿ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಮೈಸೂರು ಮೃಗಾಲಯ ನಿರ್ವಹಣೆ ದೇಶದ ಎಲ್ಲ ಮೃಗಾಲಯಗಳಿಗೆ ಮಾದರಿಯಾಗಿದೆ. ಹೀಗಾಗಿಯೇ ಕೇಂದ್ರ ಮೃಗಾಲಯ ಪ್ರಾಧಿಕಾರ ಇಲ್ಲಿ ಕಾರ್ಯಾಗಾರ ಆಯೋಜಿಸಿದೆ. ತರಬೇತಿ ಪಡೆದು, ಉತ್ತಮ ವ್ಯವಸ್ಥಾಪಕರಾಗಿ ಹೊರಹೊಮ್ಮಬೇಕು ಎಂದು ಆಶಿಸಿದರು.
ರಾಜ್ಯ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಪವಾರ್, ಮೈಸೂರು ಮೃಗಾಲಯ ದೇಶದಲ್ಲಿಯೇ ಮಾದರಿಯಾಗಿದ್ದು, ನಿರ್ವಹಣೆ ಹಾಗೂ ಪ್ರಾಣಿಗಳ ಆರೋಗ್ಯಸ್ನೇಹಿ ವಾತಾವರಣವು ಉತ್ತಮವಾಗಿದೆ. ಅರಿವೂ ಮೂಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೃಗಾಲಯಕ್ಕೆ ವಾರ್ಷಿಕ 40 ಲಕ್ಷ ಜನರು ಭೇಟಿ ನೀಡುತ್ತಿದ್ದು, ಅವರಲ್ಲಿ ಶೇ.10ರಷ್ಟು ಮಂದಿಯಲ್ಲಿ ಕಾಳಜಿ ಮೂಡಿದರೆ ಪ್ರಕೃತಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.