ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಆಗ್ರಹಿಸಿ ಡಿಎಸ್‌ಎಸ್ ಪ್ರತಿಭಟನೆ, ಸಿಎಂಗೆ ಮನವಿ ಸಲ್ಲಿಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೦:ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾಸಾಹೇಬ ಎನ್. ಮೂರ್ತಿ ಸ್ಥಾಪಿತ ಜಿಲ್ಲಾ ಸಮಿತಿ ವತಿಯಿಂದ “ಸುಪ್ರೀಂ ಕೋಟ್ ತೀರ್ಪಿನಂತೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ಅನುಷ್ಠಾನ ಮಾಡುವ ಕುರಿತು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಅಶೋಕ ಕರೆಕಲ್ಲ ಮಾತನಾಡಿ, ಪರಿಶಿಷ್ಟ ಜಾತಿಗಳ ಮೀಸಲಾತಿಯು ೧೦೧ ಪರಿಶಿಷ್ಟ ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ. ಆದ್ದರಿಂದ ಪರಿಶಿಷ್ಟ ಮೀಸಲಾತಿಯನ್ನು ೪ ಗುಂಪುಗಳನ್ನಾಗಿ ವರ್ಗೀಕರಣ ಮಾಡಲು ಒತ್ತಾಯಿಸಿ ೩ ದಶಕಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಚಳವಳಿ ಮಾಡಿದ ಹಲವರು ಜೀವ, ಜೀವನ ಮತ್ತು ಬದುಕನ್ನೇ ಬಲಿಕೊಟ್ಟು ಬಸವಳಿದಿದ್ದಾರೆ. ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಿಸಿ ಒಳಮೀಸಲಾತಿ ಕಲ್ಪಿಸಲು ಒತ್ತಾಯಿಸಿ ನಡೆಸಿದ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ೨೦೦೪ರಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ರಚಿಸಿತು. ಆಯೋಗ ಸರ್ಕಾರಕ್ಕೆ ದಿನಾಂಕ ೧೪-೦೬-೨೦೧೨ರಂದು ವರದಿ ಸಲ್ಲಿಸಿತು. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟವು ನಿವೃತ್ತ ನ್ಯಾ. ಸದಾಶಿವ ಅವರ ವರದಿಯಲ್ಲಿನ ದತ್ತಾಂಶದ ಪ್ಯಾರ-೧ನ್ನು ಅಂಗೀಕರಿಸಿ ದಿನಾಂಕ ೩೧-೦೩-೨೦೨೩ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. ಕರ್ನಾಟಕ ರಾಜ್ಯ ಸರ್ಕಾರ ಮತ್ತಷ್ಟು ವಿಳಂಬ ಧೋರಣೆ ಮಾಡಿ ಮೀನಾಮೇಷ ಎಣಿಸದೆ ಸುಪ್ರೀಂ ಕೋರ್ಟ್ ತೀರ್ಪಿಗೆ ಹಾಗೂ ಸಂವಿಧಾನಕ್ಕೆ ಗೌರವ ನೀಡಿ ಈ ಕೂಡಲೇ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡಲು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡಮನಿ ಹಾಗೂ ಮುಖಂಡ, ಹಿರಿಯ ಮೀಸಲಾತಿ ಹೋರಾಟಗಾರ ತಿಪ್ಪಣ್ಣ ಮಾದರ ಮಾತನಾಡಿ, ಸುಪ್ರೀಂ ಕೋರ್ಟ್ನ ೭ ನ್ಯಾಯಾಧೀಶರ ತೀರ್ಪಿನಂತೆ ಪರಿಶಿಷ್ಟರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಅನುಷ್ಠಾನಕ್ಕೆ ತರಲಿ. ೨೦೨೩-೨೦೨೪ ಮತ್ತು ೨೦೨೪-೨೦೨೫ನೇ ಸಾಲಿನಲ್ಲಿ ೨೫,೩೯೧ ಕೋಟಿ ಪರಿಶಿಷ್ಟ ಜಾತಿ, ವರ್ಗದ ಎಸ್‌ಸಿಪಿ,ಬಿಎಸ್‌ಪಿ ಅಭಿವೃದ್ಧಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಈ ಹಣವನ್ನು ಈ ಸಮಾಜದ ಅಭಿವೃದ್ದಿಗೆ ವಾಪಸ್ ನೀಡಲೇಬೇಕು ಎಂದು ಒತ್ತಾಯಿಸಿದರು.
ಪ.ಜಾತಿ, ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸರಿಯಾಗಿ ನೀಡುತ್ತಿಲ್ಲ. ಮೆರಿಟ್ ವಿದ್ಯಾರ್ಥಿ ವೇತನ ಮತ್ತು ವಿದೇಶದಲ್ಲಿ ಎಸ್.ಸಿ,ಎಸ್.ಟಿ. ವ್ಯಾಸಂಗ ಮಾಡಲು ಇದ್ದ ಪ್ರಬುದ್ಧ ಯೋಜನೆ ರದ್ದು ಮಾಡಲಾಗಿದೆ. ಅದನ್ನು ಪುನರಾರಂಭಿಸಲಿ. ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಜಾರಿಯಾಗುವವರೆಗೂ ಕೇಂದ್ರ ಮತ್ತು ರಾಜ್ಯದ ಎಲ್ಲಾ ಉದ್ಯೋಗ ನೇಮಕಾತಿಗಳನ್ನು ಸ್ಥಗಿತಗೊಳಿಸಲಿ. ಖಾಸಗಿ ಉದ್ಯೋಗ ಕ್ಷೇತ್ರ ಮತ್ತು ಗುತ್ತಿಗೆ ನೇಮಕಾತಿಗಳಲ್ಲಿಯೂ ಎಸ್.ಸಿ,ಎಸ್.ಟಿ ಮೀಸಲಾತಿ ಜಾರಿಯಾಗಲಿ. ಕೇಂದ್ರ ಸರ್ಕಾರ ಕೂಡಲೇ ಎಸ್.ಸಿ, ಎಸ್.ಟಿ ಅಭಿವೃದ್ಧಿಗಾಗಿ ಎಸ್ ಸಿಪಿ,ಬಿಎಸ್ ಪಿ ಕಾಯ್ದೆ ರಚಿಸಿ ಜನಸಂಖ್ಯೆಗನುಗುಣವಾಗಿ ಬಜೆಟ್‌ನಲ್ಲಿ ಹಣ ನೀಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಗುತ್ತಿಗೆ ಆಧಾರ ನೌಕರ ಸಹಾಯಕ ಎಂಜಿನಿಯರ್ ಅವರನ್ನು ಕೂಡಲೇ ಬೇರೆ ಜಿಲ್ಲೆಗೆ ಅತೀ ಶೀಘ್ರದಲ್ಲಿ ವರ್ಗಾವಣೆ ಮಾಡÀಬೇಕು. ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೊರಾರ್ಜಿ ದೇಸಾಯಿ ಕಿತ್ತೂರರಾಣಿ ಚೆನ್ನಮ್ಮ ಶಾಲೆಗಳಲ್ಲಿ ೧೫ ವರ್ಷಗಳ ಮೇಲ್ಪಟ್ಟು ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರನ್ನು ಕಾಯಂಗೊಳಿಸಬೇಕು ಎಂದರು.
ಬಸವನ ಬಾಗೇವಾಡಿ ಪುರಸಭೆ ಮಾಜಿ ಅಧ್ಯಕ್ಷ, ದಲಿತ ಮುಖಂಡ ಸಂಜೀವ ಕಲ್ಯಾಣಿ, ಹಿರಿಯ ಮೀಸಲಾತಿ ಹೋರಾಟಗಾರ ರಮೇಶ ಆಲಮಟ್ಟಿ, ದಲಿತ ಮುಖಂಡ ಅಶೋಕ ನಡುವಿನಮನಿ, ಜಿಲ್ಲಾ ಉಪಾಧ್ಯಕ್ಷ ನಾಗರಾಜ ತಳವಾರÀ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಯಮನಪ್ಪ ಮ್ಯಾಗೇರಿ, ಬಸವನ ಬಾಗೇವಾಡಿ ತಾಲೂಕ ಅಧ್ಯಕ್ಷ ಬಸಲಿಂಗಪ್ಪ. ನಂದಿ, ದಲಿತ ಮುಖಂಡ ಪರಸು ಸಂದಿಮನಿ, ಇಂಗಳೇಶ್ವರ ಗ್ರಾಮ ಶಾಖೆ ಅಧ್ಯಕ್ಷ ಪರಶುರಾಮ ಚಿಮ್ಮಲಗಿ, ಕೋಲಾರ ತಾಲೂಕು ಅಧ್ಯಕ್ಷ ಮಾರುತಿ ಮಾದರ, ಜಿಲ್ಲಾ ಕಾರ್ಮಿಕ ಘಟಕದÀ ಅಧ್ಯಕ್ಷ ಹನುಮಂತ ಹಾದಿಮನಿ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸೋಮು ಯರನಾಳ, ಹನುಮಂತ ಬಾಗೇವಾಡಿ, ಶರಣು ಬಾಗೇವಾಡಿ ಮತ್ತಿತರರು ಉಪಸ್ಥಿತರಿದ್ದರು.