ತಾಯಿ ಕನಸು ನನಸು ಮಾಡುವುದೇ ಸಂಸ್ಕಾರ : ಬಾಳಾ ಸಾಹೇಬ್ ಲೋಕಾಪುರ
ಕಲಬುರಗಿ:ಸೆ.9:ಸೃಷ್ಟಿಯ ಮೂಲ ತಾಯಿ. ತಾಯಿ ಎಲ್ಲರ ಮನದಾಳದಲ್ಲಿದ್ದಾಳೆ. ತಾಯಿ ಕಂಡ ಕನಸನ್ನು ನನಸು ಮಾಡುವುದೇ ನಿಜವಾದ ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿ. ಎಲ್ಲರ ಮನದಲ್ಲಿ ಈ ಮನೋಭಾವ ರೂಢಿಯಾದರೆ ಸಾಮಾಜಿಕ ಮೌಲ್ಯ ಬೆಳೆದು ಸಮಾಜ ಉದ್ದಾರವಾಗುತ್ತದೆ ಎಂದು ಹಿರಿಯ ಸಾಹಿತಿ ಬಾಳಾ ಸಾಹೇಬ್ ಲೋಕಾಪುರ ಹೇಳಿದರು.
ಕಲಬುರಗಿ ಜನರಂಗವು ದಿ. ಗೌರಮ್ಮ ರುದ್ರಯ್ಯ ಘಂಟಿ ಸ್ಮರಣಾರ್ಥ ಹಾಗೂ ಎಂ.ಎಂ. ಕಲ್ಬುರ್ಗಿ ಅವರಿಗೆ ಅರ್ಪಿಸುವ ನಿಮಿತ್ತ ಶ್ರೀಮತಿ. ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ ‘ರಕ್ತ ವಿಲಾಪ’ ನಾಟಕದ ರಂಗ ಪ್ರಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಟಕ ಮಾಡುವುದು ಸರಳವಲ್ಲ. ಜನರಂಗದ ರುವಾರಿ ಶಂಕ್ರಯ್ಯ ಘಂಟಿ 50 ನಾಟಕಗಳನ್ನು ನಿರ್ದೇಶಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಜನರಂಗದ ಮೂಲಕ ಮೌಲ್ಯಯುತ ನಾಟಕ ಪ್ರಾಯೋಗಗಳನ್ನು ಸಾಂಸ್ಕೃತಿಕ ಮನಸ್ಸಿನಿಂದ ಸಮಾಜಕ್ಕೆ ನೀಡಿದ್ದಾರೆ. ಆಯಾ ನೆಲದ ಕಲಾವಿದರು ಮಾಡಲೇಬೇಕಾದ ಸಾಂಸ್ಕೃತಿಕ ಹೊಣೆಗಾರಿಕೆ ಎಂದರು.
ಪ್ರಚಲಿತ ದಿನಗಳಲ್ಲಿ ಕೊಲೆ, ಸುಲಿಗೆ, ದರೋಡೆ ಮತ್ತು ಅತ್ಯಾಚಾರ ಪ್ರಕರಣಗಳು ನಿರಂತರ ನಡೆಯುತ್ತಿವೆ. ರಕ್ತ ವಿಲಾಪದ ಸಂಗತಿಗಳು ನಾಟಕ ಸಾಹಿತ್ಯ ದೃಶ್ಯ ಕಾವ್ಯಕ್ಕೆ ಇಂಬು ನೀಡುತ್ತದೆ. ಲೇಖಕ ವಿಕ್ರಮ ವಿಸಾಜಿ ಸಾಹಿತ್ಯವನ್ನು ಮನೋಜ್ಞವಾಗಿ ರಚಿಸಿದ್ದಾರೆ. ನೆಲದ ಸಾಹಿತಿಗಳು ತಮ್ಮ ವಿಚಾರಗಳನ್ನು ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿಗೆ ಬಳುವಳಿ ನೀಡಿದಾಗ ಮಾತ್ರ ಸಂವೇದನಾಶೀಲ ಸಮಾಜವನ್ನು ಕಾಣಬಹುದು ಎಂದರು.
ಲಿಂಗಸಗೂರು ವೀರಶೈವ ವಿದ್ಯಾ ವರ್ಧಕ ಸಂಘದ ಆಡಳಿತಧಿಕಾರಿ
ಬಸಂತರಾಯ ಮುಖ್ಯ ಅತಿಥಿಯಾಗಿ ಮಾತನಾಡಿ ಈ ನೆಲದಲ್ಲಿ ಬೆಳೆದು ಮರಳಿ ಹೋಗುವ ಮುನ್ನ ಇದೇ ನೆಲಕ್ಕೆ ಏನಾದರು ಕೊಟ್ಟು ಹೋಗುವ ಕಾಳಜಿ ಸಂವೇದನಾಶೀಲ ಕಲಾವಿದರು, ಕವಿ, ಸಾಹಿತಿಗಳಿಗೆ ನಿಸ್ವಾರ್ಥ ಚಿಂತನೆಯಿರಬೇಕು. ನಾಟಕ ಸಾಹಿತ್ಯಕ್ಕೆ ಎರಡು ಮುಖದ ಚಿಂತನೆಯಿದೆ. ನಾಟಕವಾಗಿ ಪರಿಣಾಮಕಾರಿ ರಂಜನೆ ಮತ್ತು ಸಾಹಿತ್ಯ ಸಂವೇದನೆ. ಇದರಿಂದಾಗಿಯೇ ನಾಟಕ ಕಲೆಯನ್ನು ಮಹತ್ವದ ಸಾಹಿತ್ಯ ಮತ್ತು ಪ್ರದರ್ಶನ ಕಲಾ ಮಾಧ್ಯಮ ಎನ್ನಲಾಗುತ್ತದೆ ಎಂದರು.
ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಮಾತನಾಡಿ ನಾಟಕ ಭಿನ್ನ ಭಾವ ಮತ್ತು ಅಭಿರುಚಿ ಪ್ರೇಕ್ಷಕರನ್ನು ಗುಣಾತ್ಮಕ ಮತ್ತು ಪರಿಣಾಮಕಾರಿಯಾಗಿ ತಲುಪುತ್ತದೆ. ನಾಟಕವನ್ನು ಕಡಿಮೆ ಪಾತ್ರಧಾರಿಗಳಿಂದ ಅಚ್ಚುಕಟ್ಟಾಗಿ ರೂಪಿಸಿ ಪ್ರದರ್ಶಿಸಿದ್ದಾರೆ ಎಂದರು.
ಕರ್ನಾಟಕ ಲಲಿತಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ವಿ. ಜಿ. ಅಂದಾನಿ ಅಧ್ಯಕ್ಷತೆ ವಹಿಸಿ ಮಾತನಾಡಿ ಒಬ್ಬ ಲೇಖಕ ಸಾಹಿತ್ಯ ಪ್ರಕಾರವಾಗಿ ನಾಟಕ ಬರೆದರೆ ಒಬ್ಬ ನಿರ್ದೇಶಕ ಭಿನ್ನ ನೆಲೆಯಲ್ಲಿ ನಾಟಕ ಮಾಧ್ಯಮದ ಮೂಲಕ ಪ್ರದರ್ಶನ ರೂಪಿಸುತ್ತಾನೆ. ‘ಕವಿ ಕಾಣದನ್ನು ರವಿ ಕಂಡಂತೆ’ ಎಂಬ ವೈಚಾರಿಕ ನೆಲೆಯಲ್ಲಿ ಹೊಸ ವಿಚಾರಗಳನ್ನು ಸಮಾಜಕ್ಕೆ ನೀಡುತ್ತಾನೆ.. ಅದು ನಾಟಕ ಮಾಧ್ಯಮಕ್ಕೆ ಇರುವ ಸತ್ವ ಮತ್ತು ಜೀವಸೆಲೆ ಎಂದರು.
ಜನರಂಗ ಅಧ್ಯಕ್ಷ ಶಂಕ್ರಯ್ಯ ಆರ್ ಘಂಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ. ಅಜಿಮ್ ಪಾಷಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎ. ಕೆ. ರಾಮೇಶ್ವರ, ಕಥೆಗಾರ್ತಿ ಸಂಧ್ಯಾ ಹೋನಗುಂಟಿಕರ್, ಡಾ. ವಿಜಯಕುಮಾರ್, ರಾಘವೇಂದ್ರ ಹಳಿಪೇಟ್, ಬಾಬುರಾವ್, ಮಲ್ಲಿಕಾರ್ಜುನ್, ಬಿ. ಎನ್. ರುದ್ರವಾಡಿ, ಮಲ್ಲಿಕಾರ್ಜುನ್, ಹಿರಿಯ ಚಿತ್ರಕಲಾವಿದ ವಿ. ಬಿ. ಬಿರಾದಾರ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು, ಪ್ರಭಾಕರ್ ಜೋಷಿ, ಸಿದ್ದು ಮರಗೋಳ ಸೇರಿದಂತೆ ಮುಂತಾದವರಿದ್ದರು.