ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ ತೇಜಸ್ವಿ
ಕಲಬುರಗಿ:ಸೆ.9:ಪರಿಸರ ಹಾಗೂ ವೈಚಾರಿಕತೆ ಪರ ಬರಹಗಳ ಮೂಲಕ ಅಸಂಖ್ಯಾತ ವ್ಯಕ್ತಿಗಳನ್ನು ಪ್ರಭಾವಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು, ನಾಡು-ನುಡಿ ಏಳಿಗೆಗೆ ತಮ್ಮದೇ ಆದ ವಿಶಿಷ್ಟ ಬರಹಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ ಮೇರು ಸಾಹಿತಿಯಾಗಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್. ನಗರದಲ್ಲಿರುವ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ 86ನೇ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತಿದ್ದರು.
ತೇಜಸ್ವಿಯವರು ನವ್ಯ ಸಾಹಿತ್ಯ ಉತ್ಕರ್ಷ ಸ್ಥಿತಿಯಲ್ಲಿದ್ದ ಕಾಲದಿಂದ ಬಂಡಾಯದ ಕಾಲಾವಧಿಯಲ್ಲಿ ಔಧ್ಯಮಿಕ ಆವಿಷ್ಕಾರ, ಪ್ರಗತಿಗಳ ಆಸ್ಪೋಟನೆಯ ಹಿನ್ನಲೆಯಲ್ಲಿ ಸಮಾಜದ ನಿರ್ವೀರ್ಯ ಮೌಲ್ಯಗಳ ಪರಿಸರದಲ್ಲಿ ಅನನ್ಯ ಸಾಹಿತ್ಯ ಕಲೆಗಾರರಾಗಿ ಬೆಳೆದರು. ಅವರು ರಚಿಸಿರುವ ಕೃತಿಗಳಲ್ಲಿ ಆಳ ಮತ್ತು ಸಂಕೀರ್ಣತೆಯನ್ನು ಕಾಣಬಹುದಾಗಿದೆ. ಮೂಢನಂಬಿಕೆಗಳು, ಶೋಷಣೆಗಳು, ಸಭ್ಯತೆ ಸೋಗಿನ ಬಗೆಗೆ ಬಂಡಾಯದ ಅಂಶಗಳನ್ನು ಅವರು ರಚಿಸಿದ ನಾಟಕ ಹಾಗೂ ಕಥಾ ಸಾಹಿತ್ಯ ಕೃತಿಗಳಲ್ಲಿ ಕಂಡುಬರುತ್ತವೆ. ನಿಸರ್ಗ, ನಾಗರೀಕತೆ, ಮಾನವೀಯ ಮೌಲ್ಯಗಳು, ತತ್ವಜ್ಞಾನದ ಚಿಂತನೆಗಳುಳ್ಳ ತೇಜಸ್ವಿಯವರ ಬರಹಗಳ ಅಧ್ಯಯನ ಅಗತ್ಯವಾಗಿದೆ ಎಂದು ನುಡಿದರು.
ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್. ಬಿರಾದಾರ, ಶಿಕ್ಷಕಿಯರಾದ ಪ್ರಿಯಾಂಕಾ ಉಜಳಂಬಿ, ನಿಲೊಫರ್ ಶೇಖ್ ಹಾಗೂ ವಿದ್ಯಾರ್ಥಿಗಳಿದ್ದರು.